Site icon Vistara News

Parliament Session: ನೂತನ ಮೂರು ಕ್ರಿಮಿನಲ್ ವಿಧೇಯಕಗಳಿಗೆ ರಾಜ್ಯಸಭೆಯಿಂದಲೂ ಒಪ್ಪಿಗೆ

Vistara Editorial,Justice should be the priority of the new criminal laws

ನವದೆಹಲಿ: ನಿನ್ನೆ ಲೋಕಸಭೆ ಅನುಮೋದಿಸಿದ್ದ ಮೂರು ಕ್ರಿಮಿನಲ್ ಕಾನೂನು ವಿಧೇಯಕಗಳಿಗೆ (Criminal Bills) ರಾಜ್ಯ ಸಭೆ (Rajya Sabha) ಕೂಡ ಪ್ರತಿಪಕ್ಷಗಳ ಸಂಸದರ (Opposition MPs) ಅನುಪಸ್ಥಿತಿಯಲ್ಲಿ ತನ್ನ ಒಪ್ಪಿಗೆ ನೀಡಿತು. ಬ್ರಿಟಿಷ್ ಕಾಲದ ಕಾನೂನುಗಳ ಬದಲಿಗೆ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, ಭಾರತೀಯ ಸಾಕ್ಷ್ಯ ವಿಧೇಯಕಗಳು ಅವಿರೋಧವಾಗಿ ಪಾಸಾಗಿದ್ದು, ಇದೊಂದು ಐತಿಹಾಸಿಕ ದಿನ ಎಂದು ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ (Vice President Jagdeep Dhankhar)ಅವರು ಹೇಳಿದ್ದಾರೆ.

ನಾವು ಆಗಸ್ಟ್ 2019 ರಿಂದ ಈ ಕುರಿತು ಚರ್ಚಿಸುತ್ತಿದ್ದೇವೆ. ಇಂದು ವಿಧೇಯಕಗಳನ್ನು ಪ್ರಸ್ತುತಪಡಿಸಲು ನಾನು ಸಂತೋಷಪಡುತ್ತೇನೆ. ಕೇವಲ ಕಾನೂನುಗಳ ಹೆಸರುಗಳನ್ನು ಬದಲಾಯಿಸಲಾಗಿಲ್ಲ, ಅವುಗಳ ಉದ್ದೇಶಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬ್ರಿಟಿಷ್ ಆಳ್ವಿಕೆಯನ್ನು ರಕ್ಷಿಸಲು ರೂಪಿಸಲಾಗಿದ್ದ ಕಾನೂನುಗಳಾಗಿದ್ದವು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಐಪಿಸಿ, ಸಿಆರ್ಪಿಸಿ ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬದಲಿಗೆ ಜಾರಿ ಮಾಡಲಾಗುತ್ತಿರುವ ಹೊಸ ವಿಧೇಯಕಗಳ ಬಗ್ಗೆ ಹೇಳಿದರು.

ಕೊಲೆ ಮತ್ತು ಮಹಿಳೆಯರ ವಿರುದ್ಧ ಅಪರಾಧಗಳಿಗಿಂತಲೂ ಖಜಾನೆಯನ್ನು ಲೂಟಿ ಮಾಡುವುದು, ರೈಲ್ವೇ ಹಳಿಗಳನ್ನು ಒಡೆಯುವುದು ಮತ್ತು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಪಿತೂರಿ ನಡೆಸುವ ಅಪರಾಧಗಳನ್ನ ಶಿಕ್ಷಿಸುವುದೇ ಈಗ ಚಾಲ್ತಿಯಲ್ಲಿರುವ ಕ್ರಿಮಿನಲ್‌ ಕಾನೂನುಗಳ ಆದ್ಯತೆಯನ್ನು ನಾವು ಕಾಣಬಹುದು ಎಂದು ಅಮಿತ್ ಶಾ ಅವರು ಹೇಳಿದ್ದಾರೆ.

ಇಂದು ಮಂಡಿಸಲಾಗಿರುವ ಈ ಮೂರು ಕ್ರಿಮಿನಲ್ ವಿಧೇಯಕಗಳು ಉದ್ದೇಶವು ಶಿಕ್ಷೆ ನೀಡುವುದಲ್ಲ, ಬದಲಿಗೆ ನ್ಯಾಯ ಒದಗಿಸುವುದಾಗಿದೆ ಎಂದು ಕೇಂದರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು. ಈ ಕಾನೂನುಗಳ ಆತ್ಮವು ಭಾರತೀಯವಾಗಿದೆ ಮತ್ತು ಮೊದಲ ಬಾರಿಗೆ, ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಭಾರತವು ಭಾರತಕ್ಕಾಗಿ ಮತ್ತು ಭಾರತೀಯ ಸಂಸತ್ತಿನಲ್ಲಿ ಮಾಡಿದ ಕಾನೂನುಗಳಿಂದ ನಿಯಂತ್ರಿಸಲಿದೆ ಎಂದು ಅಮಿತ್ ಶಾ ಅವರು ಹೇಳಿದರು.

ನಿನ್ನೆ ಲೋಕಸಭೆಯಿಂದ ಕ್ರಿಮಿನಲ್ ವಿಧೇಯಕಗಳಿಗೆ ಒಪ್ಪಿಗೆ

ಭಾರತದ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು (colonial-era criminal laws) ಬದಲಿಸುವ ಮೂರು ನಿರ್ಣಾಯಕ ವಿಧೇಯಕಗಳನ್ನು ಬುಧವಾರ ಲೋಕಸಭೆಯಲ್ಲಿ, (Lok Sabha) ಅಕ್ಷರಶಃ ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ (opposition MPs) ಅನುಮೋದನೆ ಪಡೆದುಕೊಳ್ಳಲಾಯಿತು. ಭಾರತೀಯ ನ್ಯಾಯ (ಎರಡನೇ) ಸಂಹಿತಾ- 2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ- 2023 ಮತ್ತು ಭಾರತೀಯ ಸಾಕ್ಷಿ (ಎರಡನೇ) ವಿಧೇಯಕ- 2023 ವಿಧೇಯಕಗಳು, 1860ರ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ (1973) ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ , ಇಂಡಿಯನ್ ಎವಿಡೆನ್ಸ್ ಆಕ್ಟ್ -1872 ಕಾನೂನುಗಳನ್ನು ಬದಲಿಸಲಿವೆ.

ಸಂಸತ್ ಭದ್ರತಾ ಲೋಪ ಚರ್ಚೆಯ ಹಿನ್ನೆಲೆಯಲ್ಲಿ 143 ಸಂಸತ್ ಸದಸ್ಯರನ್ನು ಅಮಾನತು ಮಾಡಲಾಗಿದೆ. ಹಾಗಾಗಿ, ಯಾವುದೇ ಚರ್ಚೆ ಇಲ್ಲದೇ ಲೋಕಸಭೆಯು ಮಹತ್ವದ ಮೂರು ವಿಧೇಯಕಗಳಿಗೆ ಒಪ್ಪಿಗೆ ನೀಡಿತು. ಬುಧವಾರವೂ ಇಬ್ಬರು ಸಂಸದರನ್ನು ಅಮಾನತು ಮಾಡುವ ಮೂಲಕ ಲೋಕಸಭೆಯಿಂದ ಸಸ್ಪೆಂಡ್ ಆದ ಸಂಸದರ ಸಂಖ್ಯೆಯು 97ಕ್ಕೆ ಏರಿಕೆಯಾಯಿತು. ರಾಜ್ಯಸಭೆಯ ಸದಸ್ಯರೂ ಸೇರಿ ಒಟ್ಟಾರೆ ಸಸ್ಪೆಂಡ್ ಆದವರ ಸಂಖ್ಯೆ 143 ದಾಟಿದೆ.

ಈಗಿನ ದಿನಗಳಿಗೆ ಸಂಪೂರ್ಣವಾಗಿ ಸೂಕ್ತವಲ್ಲದ ವಸಾಹತುಶಾಹಿ ಯುಗದ ನಿಯಮಗಳನ್ನು ಹೊಸ ಕಾನೂನುಗಳು ಬದಲಿಸುತ್ತವೆ ಎಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೊಸ ವಿಧೇಯಕಗಳು ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಜನರ ಯೋಗಕ್ಷೇಮಕ್ಕೆ ಹೆಚಚು ಒತ್ತು ನೀಡುತ್ತವೆ ಎಂದು ತಿಳಿಸಿದರು. ಈ ಹೊಸ ಕ್ರಿಮಿನಲ್ ಕಾನೂನಗಳನ್ನು ಸಂಪೂರ್ಣವಾಗಿ ಓದಿದ್ದೇನೆ ಮತ್ತು ಈ ಕಾನೂನುಗಳು ನಮ್ಮ ಸಂವಿಧಾನದ ಮನೋಭಾವಕ್ಕೆ ಅನುಗಣವಾಗಿವೆ ಎಂದು ಶಾ ಹೇಳಿದರು.

ಕೆಲವು ಬದಲಾವಣೆಗಳನ್ನು ಮಾಡಬೇಕಿದ್ದರಿಂದ ಮುಂಗಾರು ಅಧಿವೇಶನದ ನಂತರ ವಿಧೇಯಕಗಳನ್ನು ಸರ್ಕಾರವು ವಾಪಸ್ ಪಡೆದುಕೊಂಡಿತ್ತು. ಬಳಿಕ ಪರಿಷ್ಕೃತ ವಿಧೇಯಕಗಳನ್ನು ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲಾಯಿತು. ಹೊಸ ವಿಧೇಯಕಗಳ್ನು ಸ್ಥಾಯಿ ಸಮಿತಿ ಪರಿಶೀಲಿಸಿದ್ದು, ಅಧಿಕೃತ ತಿದ್ದುಪಡಿಗಳನ್ನು ತರುವ ಬದಲು ಮತ್ತೆ ವಿಧೇಯಕಗಳನ್ನು ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: ವಿಸ್ತಾರ Explainer: 150 ಸಭೆ, 3200 ಸಲಹೆ ಸ್ವೀಕಾರ: ಹೊಸ ಕ್ರಿಮಿನಲ್‌ ಕಾಯಿದೆಗಳಲ್ಲಿ ಏನು ಬದಲಾವಣೆ?

ಪ್ರತಿಪಕ್ಷಗಳಿಂದ ಏಕೆ ವಿರೋಧ?

ಪ್ರತಿಪಕ್ಷ ಸಾಲಿನ ಎಲ್ಲ ಸಂಸದರನ್ನು ಅಮಾನತು ಮಾಡಿ, ಯಾವುದೇ ಚರ್ಚೆಯಿಲ್ಲದೆ ಪ್ರಮುಖ ವಿಧೇಯಕಗಳ್ನು ಅಂಗೀಕರಿಸುವ ಸರ್ಕಾರದ ತಂತ್ರವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಕ್ರಿಮಿನಲ್ ಕಾನೂನು ವಿಧೇಯಕಗಳನ್ನು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ ಹಲವು ಪ್ರತಿಪಕ್ಷಗಳು ಕಟುವಾಗಿ ಟೀಕಿಸಿವೆ.

ನ್ಯಾಯಾಧೀಶರು, ನ್ಯಾಯಶಾಸ್ತ್ರಜ್ಞರು, ವಕೀಲರು, ಅಪರಾಧಶಾಸ್ತ್ರಜ್ಞರು ಮತ್ತು ಸಾರ್ವಜನಿಕರನ್ನು ಒಳಗೊಂಡಂತೆ ಇತರ ಮಧ್ಯಸ್ಥಗಾರರು ವಿಧೇಯಕಗಳ ಮೇಲೆ ದೊಡ್ಡ ಸಾರ್ವಜನಿಕ ಚರ್ಚೆಯನ್ನು ಕಾಂಗ್ರೆಸ್ ಬಯಸಿತ್ತು. ಆದರೆ, ಕೇಂದ್ರ ಸರ್ಕಾರವು ಇದಕ್ಕೆ ಅವಕಾಶವನ್ನು ನೀಡಲಿಲ್ಲ. ಹಳೆಯ ಕಾನೂನಿನಲ್ಲಿರುವ ಅನೇಕ ಸಂಗತಿಗಳನ್ನು ತೆಗೆದು ಹಾಕಿರುವುದಾಗಿ ಕೇಂದ್ರ ಸರ್ಕಾರ ಹೇಳಿದ್ದರೂ, ಹೊಸ ವಿಧೇಯಕದಲ್ಲಿ ಅವೇ ಅಂಶಗಳನ್ನು ಉಳಿಸಿಕೊಳ್ಳಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಈ ಸುದ್ದಿಯ ಕುರಿತು ನಿಮ್ಮ ಅನಿಸಿಕೆ ಏನು, ಕಮೆಂಟ್ ಮಾಡಿ ತಿಳಿಸಿ

Exit mobile version