Site icon Vistara News

RSS Meeting: ಆರ್‌ಎಸ್‌ಎಸ್‌ ವಾರ್ಷಿಕ ಸಭೆಗೆ ಚಾಲನೆ; ಹೊಸಬಾಳೆ ಮರು ಆಯ್ಕೆ?

RSS Leaders

3 Days Annual meet of RSS, Akhil Bharatiya Prathinidhi Sabha begins at Nagpur

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರೇಶಿಂ ಬಾಂಗ್‌ನ ಸ್ಮೃತಿ ಭವನದಲ್ಲಿ ಮೂರು ದಿನಗಳ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS Meeting) ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಗೆ (Akhil Bharatiya Prathinidhi Sabha) ಶುಕ್ರವಾರ (ಮಾರ್ಚ್‌ 15) ಚಾಲನೆ ನೀಡಲಾಗಿದೆ. ಆರ್‌ಎಸ್‌ಎಸ್‌ ಸರಸಂಘಚಾಲಕ‌ ಡಾ.ಮೋಹನ್ ಭಾಗವತ್ (Mohan Bhagwat), ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (Dattatreya Hosabale) ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಯನ್ನು ಉದ್ಘಾಟಿಸಿದರು. ಮೂರು ದಿನಗಳ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರನ್ನು ಸರಕಾರ್ಯವಾಹರಾಗಿ ಮುಂದುವರಿಸುವುದು ಸೇರಿ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಅಖಿಲ ಭಾರತೀಯ ಪ್ರತಿನಿಧಿ ಸಭೆಗೆ ಚಾಲನೆ ನೀಡಿದ ಬಳಿಕ ಸಹಸರಕಾರ್ಯವಾಹ ಡಾ. ಮನಮೋಹನ್‌ ವೈದ್ಯ ಅವರು ಸುದ್ದಿಗೋಷ್ಠಿ ನಡೆಸಿದರು. “ಸಂಘಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ಹೇಳಿದಂತೆ ‘ಸಂಘ ಸಂಪೂರ್ಣ ಸಮಾಜದ ಸಂಘಟನೆ’. ಅದರ ಅನುಭವವನ್ನು ನಾವು ಕಳೆದ 99 ವರ್ಷಗಳಿಂದ ಪಡೆಯುತ್ತಿದ್ದೇವೆ. 2017ರಿಂದ 2024ರವರೆಗಿನ ಸಂಘಕಾರ್ಯದ ವ್ಯಾಪ್ತಿಯನ್ನು ಗಮನಿಸಿದರೆ ಅದರ ವ್ಯಾಪಕತೆ ಅರಿವಿಗೆ ಬರುತ್ತದೆ. ಏಕೆಂದರೆ ರಾಷ್ಟ್ರದ ಶೇ.99ರಷ್ಟು ಜಿಲ್ಲೆಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ತಲುಪಿದೆ” ಎಂದು ತಿಳಿಸಿದರು.

“ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಪ್ರತಿವರ್ಷವೂ ನಡೆಯುತ್ತದೆ. ಈ ವರ್ಷ ಸಂಘ ಮತ್ತು ಸಂಘ ಪ್ರೇರಿತ 36 ಸಂಘಟನೆಗಳ ಅಖಿಲ ಭಾರತ ಮಟ್ಟದ ಹಾಗೂ ಪ್ರಾಂತ ಮಟ್ಟದ ಅಧಿಕಾರಿಗಳು ಸೇರಿದಂತೆ ಸಂಘದ ಎಲ್ಲ 45 ಪ್ರಾಂತಗಳಿಂದ 1500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದಾರೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಾಗ್ಪುರದಲ್ಲಿ ಈ ಸಭೆ ನಡೆಯುತ್ತದೆ. ಈ ವರ್ಷ ಸಂಘದ ಜವಾಬ್ದಾರಿಗಳ ಚುನಾವಣೆಯ ವರ್ಷವಾಗಿದ್ದು ಬೈಠಕ್‌ನಲ್ಲಿ ಸರಕಾರ್ಯವಾಹ, ಕ್ಷೇತ್ರೀಯ ಸಂಘಚಾಲಕರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತದೆ” ಎಂದು ಮಾಹಿತಿ ನೀಡಿದರು.

“ಸಂಘದಲ್ಲಿ ಪ್ರಾಂತ, ವಿಭಾಗ, ಜಿಲ್ಲೆ, ಖಂಡ ಎಂಬ ರಜನೆ ಇದೆ. ಅದರನ್ವಯ 45 ಪ್ರಾಂತಗಳ, 922 ಜಿಲ್ಲೆಗಳ, 6,597 ಖಂಡಗಳ, 27,720 ಮಂಡಲಗಳಲ್ಲಿ (12-15 ಗ್ರಾಮಗಳನ್ನೊಳಗೊಂಡ ಒಂದು ಸಮೂಹ ಮಂಡಲ) 73,117 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷಕ್ಕಿಂತ 4,464 ಶಾಖೆಗಳ ಸಂಖ್ಯೆ ವೃದ್ಧಿಸಿದೆ. ಈ ಶಾಖೆಗಳಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು, ಶೇ. 40 ರಷ್ಟು ಉದ್ಯೋಗಿಗಳಿದ್ದಾರೆ. ಸಾಪ್ತಾಹಿಕ ಮಿಲನ್‌ಗಳ ಸಂಖ್ಯೆ 27,717. ಕಳೆದ ವರ್ಷಕ್ಕಿಂತ ಈ ಬಾರಿ 840 ಸಾಪ್ತಾಹಿಕ ಮಿಲನ್‌ಗಳ ಸಂಖ್ಯೆ ಹೆಚ್ಚಾಗಿದೆ. ತಿಂಗಳಿಗೊಮ್ಮೆ ನಡೆಯುವ ಸಂಘ ಮಂಡಲಿಗಳ ಸಂಖ್ಯೆ 10,567. ನಗರ ಮತ್ತು ಮಹಾನಗರಗಳಲ್ಲಿರುವ 10,000 ಬಸ್ತಿಗಳಲ್ಲಿ 43,000 ಪ್ರತ್ಯಕ್ಷ ಶಾಖೆಗಳಿವೆ” ಎಂದು ತಿಳಿಸಿದರು.

ಇದನ್ನೂ ಓದಿ: ಆರ್‌ಎಸ್‌ಎಸ್‌ನ ರುದ್ರೇಶ್‌ ಹತ್ಯೆ; ದಕ್ಷಿಣ ಆಫ್ರಿಕಾದಲ್ಲಿ ಆರೋಪಿ ಮೊಹಮ್ಮದ್‌ ಗೌಸ್‌ ಬಂಧನ

“ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಐತಿಹಾಸಿಕ ರಾಮಲಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಇಡೀ ದೇಶದ ಜನರು ಸಂಭ್ರಮದಿಂದ ಕೈಜೋಡಿಸಿದ್ದರು. ರಾಮಲಲಾನ ಪ್ರಾಣಪ್ರತಿಷ್ಠಾಪನೆಗೂ ಮೊದಲು ಸಂಘದ ಕಾರ್ಯಕರ್ತರು ಮನೆ ಮನೆಗೆ ಮಂತ್ರಾಕ್ಷತೆಯನ್ನು ವಿತರಿಸಿದರು. ಈ ಅಭಿಯಾನದಲ್ಲಿ 5 ಲಕ್ಷದ 98 ಸಾವಿರದ, 778 ಗ್ರಾಮಗಳನ್ನು ಸಂಪರ್ಕಿಸಲಾಗಿದ್ದು, 44 ಲಕ್ಷ 98 ಸಾವಿರ ಪ್ರತಿನಿಧಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು. ದೇಶಾದ್ಯಂತ 19 ಕೋಟಿ 38 ಲಕ್ಷ ಕುಟುಂಬಗಳನ್ನು ಸಂಪರ್ಕಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಿದ್ದರು. ದೇಶಾದ್ಯಂತ 9 ಲಕ್ಷ 85 ಸಾವಿರ ದೇವಾಲಯ ಕೇಂದ್ರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮಗಳಲ್ಲಿ 27 ಕೋಟಿ 81 ಲಕ್ಷ 54 ಸಾವಿರಕ್ಕೂ ಹೆಚ್ಚು ಜನರ ಭಾಗವಹಿಸಿದ್ದರು” ಎಂದು ವಿವರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version