ಲೇಹ್: ಲಡಾಕ್‌ನ ಕಾರ್ಗಿಲ್‌ನಲ್ಲಿ ಶುಕ್ರವಾರ ಸಂಜೆ (ಆಗಸ್ಟ್ 19) ಶಂಕಾಸ್ಪದ ವಸ್ತು ಸ್ಫೋಟಗೊಂಡು (Kargil Blast) ಮೂವರು ಮೃತಪಟ್ಟಿದ್ದಾರೆ. ಹಾಗೆಯೇ, 11 ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಗಿಲ್ ಜಿಲ್ಲೆಯ ದ್ರಾಸ್‌ನಲ್ಲಿರುವ (Drass) ಕಬಾಡಿ ನಲ್ಲಾ ಪ್ರದೇಶದಲ್ಲಿರುವ ಗುಜರಿ ಅಂಗಡಿಯಲ್ಲಿ ಶಂಕಾಸ್ಪದ ವಸ್ತುವೊಂದು ಸ್ಫೋಟಗೊಂಡ ಕಾರಣ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
“ಗುಜರಿ ಅಂಗಡಿಯಲ್ಲಿ ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡ ಕಾರಣ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 11 ಜನ ಗಾಯಗೊಂಡಿದ್ದು, ಸಿಬ್ಬಂದಿಯು ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ” ಎಂದು ಕಾರ್ಗಿಲ್ ಡೆಪ್ಯುಟಿ ಕಮಿಷನರ್ ಶ್ರೀಕಾಂತ್ ಬಾಳಾಸಾಹೇಬ್ ಸುಸೆ ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ತೀವ್ರ ಪರಿಶೀಲನೆ
ಸ್ಫೋಟದ ಕುರಿತು ಮಾಹಿತಿ ಲಭ್ಯವಾಗುತ್ತಲೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ, ಜನರನ್ನು ರಕ್ಷಿಸಿದ್ದಾರೆ. ಸ್ಫೋಟದ ತೀವ್ರತೆಗೆ ಸಿಬ್ಬಂದಿ ಆಗಮಿಸುವಷ್ಟರಲ್ಲೇ ಮೂವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಗುಜರಿ ಅಂಗಡಿ ಮಾಲೀಕ ಯಾರು? ಅದರೊಳಗೆ ಸ್ಫೋಟಕ ವಸ್ತು ಹೇಗೆ ಬಂತು? ಸ್ಫೋಟಕ ವಸ್ತು ಯಾವುದು ಎಂಬುದು ಸೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿಕಿತ್ಸೆಗೆ ಜಿಲ್ಲಾಡಳಿತ ಕ್ರಮ
ಇದನ್ನೂ ಓದಿ: Fire Accident : ಹೋಟೆಲ್‌ನಲ್ಲಿ ಸ್ಟೀಮರ್ ಸ್ಫೋಟ; ಮೂವರು ಕಾರ್ಮಿಕರಿಗೆ ಗಾಯ
ಹಾಗೆಯೇ, ಪ್ರಕರಣಕ್ಕೆ ಸಂಬಂಧಿಸಿದಂತೆ ದ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಫೋಟಗೊಂಡು ಮೂವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕಾರ್ಗಿಲ್ ಜಿಲ್ಲಾಡಳಿತವು ಸಂತಾಪ ಸೂಚಿಸಿದೆ. ಹಾಗೆಯೇ, ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ಪರಿಶೀಲನೆ ನೀಡಿದ್ದಾರೆ. ಅಲ್ಲದೆ, ಅವರ ಚಿಕಿತ್ಸೆಗೆ ಸಕಲ ರೀತಿಯ ವ್ಯವಸ್ಥೆ ಮಾಡಲಾಗಿದೆ.