ನ್ಯೂಯಾರ್ಕ್: ಅಮೆರಿಕದ ಪಶ್ಚಿಮ ಮ್ಯಾಸಚೂಸೆಟ್ಸ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತ ಮೂಲದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಪ್ರೇಮ್ಕುಮಾರ್ ರೆಡ್ಡಿ ಗೋಡಾ (27), ಪಾವನಿ ಗುಲ್ಲಾಪಲ್ಲಿ (22) ಮತ್ತು ಸಾಯಿ ನರಸಿಂಹ ಪಟಮಶೆಟ್ಟಿ (22) ಮೃತರು. ಎರಡು ವಾಹನಗಳ ನಡುವೆ ಡಿಕ್ಕಿಯಾಗಿ ಅಪಘಾತ ನಡೆದಿದ್ದು, ಸುಮಾರು ಐದು ಮಂದಿ ಗಾಯಗೊಂಡಿದ್ದಾರೆ. ಅವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಬರ್ಕ್‌ಷೈರ್ ಜಿಲ್ಲಾ ಅಟಾರ್ನಿ ಕಚೇರಿ ತಿಳಿಸಿದೆ.
ಗುರುವಾರ ಮುಂಜಾನೆ 5.30ರ ಹೊತ್ತಿಗೆ ಮನೋಜ್ ರೆಡ್ಡಿ ಡೊಂಡಾ (23), ಶ್ರೀಧರ್ ರೆಡ್ಡಿ (22), ವಿಜಿತ್ ರೆಡ್ಡಿ ಗುಮ್ಮಲಾ, ಹಿಮಾ ಐಶ್ವರ್ಯಾ ಸಿದ್ದಿರೆಡ್ಡಿ (22), ಪ್ರೇಮ್ಕುಮಾರ್ ರೆಡ್ಡಿ ಗೋಡಾ (27), ಪಾವನಿ ಗುಲ್ಲಾಪಲ್ಲಿ (22) ಮತ್ತು ಸಾಯಿ ನರಸಿಂಹ ಪಟಮಶೆಟ್ಟಿ (22) ಕಾರಿನಲ್ಲಿ ಹೋಗುತ್ತಿದ್ದರು. ಈ ವಾಹನಕ್ಕೆ ವಾಹನವೊಂದು ಡಿಕ್ಕಿಯಾಗಿದೆ. ಇವರಲ್ಲೀಗ ಮನೋಜ್, ವಿಜಿತ್, ಶ್ರೀಧರ್ ಮತ್ತು ಹಿಮಾ ಐಶ್ವರ್ಯಾ ಮತ್ತು ಡಿಕ್ಕಿ ಹೊಡೆದ ವಾಹನದ ಚಾಲಕ 46 ವರ್ಷದ ಅರ್ಮಾಂಡೋ ಬೌಟಿಸ್ಟಾ-ಕ್ರೂಜ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿ ಇದ್ದ ಇವರಲ್ಲಿ ಆರು ಮಂದಿ ನ್ಯೂ ಹೆವನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರೆ, ಮತ್ತೊಬ್ಬರು ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು ಎಂದು ವರದಿಯಾಗಿದೆ.
ಮೃತರೆಲ್ಲ ಭಾರತ ಮೂಲದವರಾಗಿದ್ದು ಅವರ ಕುಟುಂಬದವರನ್ನು ಸಂಪರ್ಕಿಸಲು ಮತ್ತು ಸಂಬಂಧಿಗಳು ಯಾರಾದರೂ ಅಮೆರಿಕದಲ್ಲಿ ಇದ್ದಾರಾ ಎಂದು ಪತ್ತೆ ಹಚ್ಚುವ ಕಾರ್ಯವನ್ನು ನ್ಯೂಯಾರ್ಕ್ ಸ್ಟೇಟ್ ಪೊಲೀಸ್ ಡಿಟೆಕ್ಟಿವ್ ಯುನಿಟ್ ಪ್ರಾರಂಭಿಸಿದೆ. ಹಾಗೇ, ಈ ಬಗ್ಗೆ ಈಗಾಗಲೇ ಅಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ಗೂ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ನ.1 ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ; ಅಲ್ಲಿನ ರಾಜ್ಯಪಾಲರ ಘೋಷಣೆ