ಮುಂಬಯಿ: ಹೆಲ್ಮೆಟ್ ಬಗ್ಗೆ ನಿರ್ಲಕ್ಷ್ಯ, ಹಾಕದಿದ್ರೆ ಏನಾಗ್ತದೆ ಅನ್ನೋ ಉಡಾಫೆ ಇರುವವರಿಗೆ ಬಿಸಿ ಮುಟ್ಟಿಸೋ ಸುದ್ದಿ ಬಂದಿದೆ. ಅದರಲ್ಲೂ ಹಿಂಬದಿ ಸವಾರರಿಗೆ ಯಾಕೆ ಹೆಲ್ಮೆಟ್ ಕಡ್ಡಾಯ ಅಂತ ಕಾನೂನು ಮಾತಾಡೋರಿಗೆ ಇದು ದೊಡ್ಡ ಏಟು. ಇನ್ನು ಮುಂದೆ ಸವಾರ ಮಾತ್ರವಲ್ಲ, ಹಿಂಬದಿ ಸವಾರ ಹೆಲ್ಮೆಟ್ ಹಾಕದೆ ಇದ್ದರೂ 500 ರೂ. ದಂಡ ವಿಧಿಸುವುದು ಮಾತ್ರವಲ್ಲ ಸವಾರನ ಲೈಸೆನ್ಸನ್ನು ಮೂರು ತಿಂಗಳ ಮಟ್ಟಿಗೆ ಅಮಾನತಿನಲ್ಲಿ ಇಡಲಾಗುತ್ತದೆ.
ಈ ನಿಯಮ ಜಾರಿಗೆ ಬರಲಿರುವುದು ಕರ್ನಾಟಕದಲ್ಲಿ ಅಲ್ಲ, ಪಕ್ಕದ ಮಹಾರಾಷ್ಟ್ರದ ಮುಂಬಯಿಯಲ್ಲಿ. ಸುರಕ್ಷಿತ ಸಂಚಾರಕ್ಕಾಗಿ ಮುಂಬಯಿ ಪೊಲೀಸರು ದೇಶದ ಹಲವು ನಗರಗಳಲ್ಲಿ ಜಾರಿಯಲ್ಲಿರುವಂತೆಯೇ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ಕಡ್ಡಾಯವಾಗಿ ಜಾರಿ ಮಾಡಿದ್ದಾರೆ. ಆದರೆ, ಉಳಿದ ನಗರಗಳಿಗಿಂತ ಭಿನ್ನವಾಗಿ ಲೈಸೆನ್ಸ್ ಅಮಾನತಿನ ಶಿಕ್ಷೆಯನ್ನು ವಿಧಿಸಿದ್ದಾರೆ. ಮುಂದಿನ ಹದಿನೈದು ದಿನದೊಳಗೆ ಈ ನಿಯಮ ಜಾರಿಗೆ ಬರಲಿದೆ.
ಮಹಾರಾಷ್ಟ್ರ ಸರಕಾರವು 1998ರ ಮೋಟಾರು ವಾಹನ ಕಾಯಿದೆಯನ್ನು ಇತ್ತೀಚೆಗಷ್ಟೇ ಪರಿಷ್ಕರಿಸಿದ್ದು, ಹೆಲ್ಮೆಟನ್ನು ಸರಿಯಾಗಿ ಧರಿಸದ ದ್ವಿಚಕ್ರ ವಾಹನ ಚಾಲಕರಿಗೆ ಸ್ಥಳದಲ್ಲೇ 2000 ರೂ. ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಒಂದೊಮ್ಮೆ ಹೆಲ್ಮೆಟ್ ಹಾಕಿಯೂ ಬಕಲ್ ಸರಿಯಾಗಿ ಕಟ್ಟಿಕೊಳ್ಳದೆ ಇದ್ದರೂ 1000 ರೂ. ದಂಡ ವಿಧಿಸುವ ಅವಕಾಶ ನೀಡಲಾಗಿದೆ.
ಇದನ್ನೂ ಓದಿ| ಹೆಲ್ಮೆಟ್ ಧರಿಸದಿದ್ರಷ್ಟೇ ಅಲ್ಲ, ಸರಿಯಾಗಿ ಧರಿಸದೆ ಇದ್ದರೂ ಬೀಳುತ್ತೆ ₹ 2000 ದಂಡ!