ನವದೆಹಲಿ: ರಸ್ತೆ ಅಪಘಾತಗಳು ಯಾವಾಗ ಬೇಕಾದರೂ ಸಂಭವಿಸಬಹುದು. ಅದಕ್ಕೇನೂ ನಿರ್ದಿಷ್ಟ ಸಮಯ ಎಂಬುದೇನೂ ಇಲ್ಲ. ಆದರೆ, ರಸ್ತೆ ಅಪಘಾತಗಳ ಅಂಕಿ-ಸಂಖ್ಯೆಗಳು ನಮ್ಮ ಈ ಎಣಿಕೆಯನ್ನು ಸುಳ್ಳು ಮಾಡುತ್ತವೆ. 2021ರಲ್ಲಿ ದೇಶದಲ್ಲಿ ಸಂಭವಿಸಿದ ಒಟ್ಟು ಅಪಘಾತಗಳ ಪೈಕಿ ಶೇ.40ರಷ್ಟು ಅಪಘಾತಗಳು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯ ಮಧ್ಯೆಯೇ ಸಂಭವಿಸಿವೆ! ಹಾಗೆಯೇ, ಮಧ್ಯ ರಾತ್ರಿ 12 ಗಂಟೆಯಿಂದ ಬೆಳಗಿನ 6 ಗಂಟೆಯವರೆಗಿನ ಅವಧಿ ಅತಿ ಸುರಕ್ಷಿತ ಸಮಯವಾಗಿದೆ. ಈ ಟೈಮಿನಲ್ಲಿ ಶೇ.10ಕ್ಕಿಂತ ಕಡಿಮೆ ಅಪಘಾತಗಳು ಸಂಭವಿಸಿವೆ!(Road Accident Deaths).
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬಿಡುಗಡೆ ಮಾಡಿರುವ ಭಾರತದಲ್ಲಿ ರಸ್ತೆ ಅಪಘಾತ-2021ರ ವರದಿಯ ಪ್ರಕಾರ, 2021ರಲ್ಲಿ ಒಟ್ಟು 4.12 ಲಕ್ಷ ಅಪಘಾತಗಳು ದಾಖಲಾಗಿವೆ. ಈ ಪೈಕಿ 1.58 ಲಕ್ಷ ಅಪಘಾತಗಳು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆ ಮಧ್ಯೆಯೇ ಸಂಭವಿಸಿವೆ.
ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಧ್ಯಾಹ್ನ ಮತ್ತು ಸಂಜೆ ಅವಧಿ ಪ್ರಯಾಣಕ್ಕೆ ಹೆಚ್ಚು ಅಪಾಯಕಾರಿಯಾಗಿದೆ. ಹಾಗೆಯೇ, ಮಧ್ಯರಾತ್ರಿಯಿಂದ ಬೆಳಗಿನ ಜಾವ ನಡುವಿನ ಅವಧಿಯಲ್ಲಿ ಕಡಿಮೆ ಅಪಘಾತಗಳು ಸಂಭವಿಸಿವೆ. ಹಾಗಾಗಿ, ಇದು ಡ್ರೈವಿಂಗ್‌ಗೆ ಸೂಕ್ತ ಸಮಯ ಎಂದು ಭಾವಿಸಬಹುದು.
ಮಧ್ಯಾಹ್ನ 3ರಿಂದ ರಾತ್ರಿ 9ರ ನಡುವೆ ಸಂಭವಿಸಿದ ಅಪಘಾತಗಳ ಪಟ್ಟಿಯಲ್ಲಿ ತಮಿಳುನಾಡು ಮುಂದಿದೆ. ಒಟ್ಟು ಈ ಅವಧಿಯಲ್ಲಿ 14416 ಅಪಘಾತ ಸಂಭವಿಸಿವೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ(10,332)ವಿದೆ. ಕೇರಳ, ಕರ್ನಾಟಕ ಮತ್ತು ಉತ್ತರಪ್ರದೇಶಗಳಲ್ಲಿ ಈ ಇದೇ ಸಮಯದಲ್ಲಿ 82,879 ಅಪಘಾತಗಳು ಘಟಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | Road Accident | ಹಲವರ ಬಾಳಲ್ಲಿ ಕತ್ತಲೆ ತಂದ ಹೊಸ ವರ್ಷದ ಮೊದಲ ದಿನ; ವಿವಿಧೆಡೆ ಅಪಘಾತಗಳಿಗೆ 10 ಮಂದಿ ಸಾವು