ಲಖನೌ: ದೊಡ್ಡ ದೊಡ್ಡ ಗೋಡೆಗಳನ್ನು ಜಿಗಿದು, ಜೈಲಿನಲ್ಲಿಯೇ ಸುರಂಗ ಕೊರೆದು ಸಿನಿಮೀಯ ರೀತಿಯಲ್ಲಿ ಕೈದಿಗಳು ಪರಾರಿಯಾಗಿರುವುದನ್ನು ಕೇಳಿದ್ದೇವೆ. ಆದರೆ, ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ ಹಾಡಹಗಲೇ, ಯಾರ ಗೊಡವೆಯೇ ಇಲ್ಲದೆ ಮೂವರು ಕೈದಿಗಳು ಪೊಲೀಸ್ ವ್ಯಾನ್‌ನಿಂದ ಪರಾರಿಯಾಗಿರುವ (Prisoners Escape) ವಿಡಿಯೊ ವೈರಲ್ ಆಗಿದೆ. ಹಾಗೆಯೇ, ಝಾನ್ಸಿ ಪೊಲೀಸರ ಕಾರ್ಯವೈಖರಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೌದು, ಸೆಪ್ಟೆಂಬರ್ 19ರಂದು ಮಧ್ಯಾಹ್ನ 1.30ರ ಸುಮಾರಿಗೆ ಮೂವರು ಕೈದಿಗಳು ಪೊಲೀಸ್ ವ್ಯಾನ್‌ನಿಂದ ಪರಾರಿಯಾಗಿರುವ ವಿಡಿಯೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮೂವರೂ ಕೈದಿಗಳನ್ನು ರೈಲ್ವೆ ಕೋರ್ಟ್‌ಗೆ ಹಾಜರುಪಡಿಸುವ ಮಾರ್ಗ ಮಧ್ಯೆ ಪೊಲೀಸರು ಚಹಾ ಕುಡಿಯಲು ಹೋಟೆಲ್‌ಗೆ ಹೋಗಿದ್ದಾರೆ. ಇದೇ ಸಮಯಕ್ಕೆ ಕಾಯುತ್ತಿದ್ದ ಕೈದಿಗಳು ವ್ಯಾನ್‌ನಿಂದ ಜಿಗಿದು ಒಂದೊಂದು ದಿಕ್ಕಿಗೆ ಓಡಿದ್ದಾರೆ. ಅವರು ಓಡಿ ಹೋಗಿ ತುಂಬ ಹೊತ್ತಾದರೂ ಪೊಲೀಸರು ವ್ಯಾನ್ ಬಳಿ ಸುಳಿದಿಲ್ಲ ಎಂಬುದು ಗಮನಾರ್ಹ.
ಇಲ್ಲಿದೆ ವೈರಲ್ ಆದ ವಿಡಿಯೊ
झांसी में तीन कैदी पुलिस वैन से फरार@Uppolice @jhansipolice pic.twitter.com/kq4n74zzfk
— Anmol dubey ( अनमोल दुबे ) (@anmoldubey110) September 21, 2023
ಯಾರಿವರು ಕೈದಿಗಳು?
ಪೊಲೀಸ್ ವ್ಯಾನ್‌ನಿಂದ ಪರಾರಿಯಾದ ಕೈದಿಗಳನ್ನು ಬ್ರಿಜೇಂದ್ರ (27), ಶೈಲೇಂದ್ರ (20) ಹಾಗೂ ಜ್ಞಾನಪ್ರಸಾದ್ (23) ಎಂದು ಗುರುತಿಸಲಾಗಿದೆ. ಇವರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಮೊಬೈಲ್‌ಗಳು ಸೇರಿ ಹಲವು ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು. ಇವರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು. ಆದರೆ, ಮೂವರು ಕೈದಿಗಳನ್ನು ಕೋರ್ಟ್‌ಗೆ ಹಾಜರುಪಡಿಸುವ ವೇಳೆ ಪೊಲೀಸರ ನಿರ್ಲಕ್ಷ್ಯದಿಂದಾಗಿ ಮೂವರೂ ಪರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್‌ಟಾಕ್ ಸ್ಟಾರ್‌ಗೆ 2 ವರ್ಷ ಜೈಲು ಶಿಕ್ಷೆ!
ಎಂಟು ಪೊಲೀಸರ ಅಮಾನತು
ಮೂವರು ಕೈದಿಗಳು ಪೊಲೀಸರ ನಿರ್ಲಕ್ಷ್ಯದಿಂದ ನಿರಾಯಾಸವಾಗಿ ಪರಾರಿಯಾದ ವಿಡಿಯೊ ವೈರಲ್ ಆಗುತ್ತಲೇ ಎಂಟು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ವ್ಯಾನ್‌ನಲ್ಲಿದ್ದ 11 ಪೊಲೀಸರ ಪೈಕಿ 8 ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ನಿರ್ಲಕ್ಷ್ಯ ವಹಿಸಿದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.