Site icon Vistara News

Railway Staffers: ರೈಲು ಹರಿದು ಕರ್ತವ್ಯನಿರತ ಮೂವರು ರೈಲ್ವೆ ಸಿಬ್ಬಂದಿ ದುರ್ಮರಣ

Train

3 railway staffers killed after local train runs over them near Mumbai

ಮುಂಬೈ: ಭಾರತೀಯ ರೈಲ್ವೆಯ (Indian Railways) ಸಿಬ್ಬಂದಿಯು ಸಿಗ್ನಲಿಂಗ್‌ (Signalling) ಸೇರಿ ಪ್ರತಿಯೊಂದು ವಿಭಾಗಗಳಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸುವ ಮೂಲಕ ರೈಲ್ವೆ ಅಪಘಾತಗಳನ್ನು, ದುರಂತಗಳನ್ನು, ಅವಘಡಗಳನ್ನು ನಿಯಂತ್ರಿಸುತ್ತಾರೆ. ಆದರೆ, ಮಹಾರಾಷ್ಟ್ರದ (Maharashtra) ಪಾಲ್ಘರ್‌ ಜಿಲ್ಲೆಯ (Palghar District) ವಸಾಯಿ ಬಳಿ ಸ್ಥಳೀಯ ರೈಲೊಂದು ಹರಿದು ರೈಲ್ವೆ ಇಲಾಖೆಯ ಮೂವರು ಸಿಬ್ಬಂದಿ (Railway Staffers) ಮೃತಪಟ್ಟಿದ್ದಾರೆ.

ಸೋಮವಾರ ರಾತ್ರಿ (ಜನವರಿ 22) 8.55ರ ಸುಮಾರಿಗೆ ವಸಾಯಿ ರೋಡ್‌ ಹಾಗೂ ನೈಗಾಂವ್‌ ಸ್ಟೇಷನ್‌ ಮಧ್ಯೆ ಮೂವರು ರೈಲ್ವೆ ಸಿಬ್ಬಂದಿಯು ಕಾರ್ಯನಿರ್ವಹಿಸುತ್ತಿದ್ದರು. ಸಿಗ್ನಲಿಂಗ್‌ ಸಮಸ್ಯೆಯ ಹಿನ್ನೆಲೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಇದೇ ವೇಳೆ, ಚರ್ಚ್‌ಗೇಟ್‌ ಕಡೆ ತೆರಳುತ್ತಿದ್ದ ಸ್ಥಳೀಯ ರೈಲು ಮೂವರು ಸಿಬ್ಬಂದಿ ಮೇಲೆ ಹರಿದಿದೆ. ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಅಧಿಕಾರಿಗಳನ್ನು ಸಿಗ್ನಲಿಂಗ್‌ ಇನ್ಸ್‌ಪೆಕ್ಟರ್‌ ವಾಸು ಮಿತ್ರ, ಎಲೆಕ್ಟ್ರಿಕಲ್‌ ಸಿಗ್ನಲಿಂಗ್‌ ಮೇಂಟೇನರ್‌ ಸೋಮನಾಥ್‌ ಉತ್ತಮ್‌ ಲಂಬುತ್ರೆ ಹಾಗೂ ಹೆಲ್ಪರ್‌ ಸಚಿನ್‌ ವಾಂಖೇಡೆ ಎಂದು ಗುರುತಿಸಲಾಗಿದೆ. ಮೂವರೂ ಅಧಿಕಾರಿಗಳು ವೆಸ್ಟರ್ನ್‌ ರೈಲ್ವೆಯ ಮುಂಬೈ ವಿಭಾಗದ ಸಿಗ್ನಲಿಂಗ್‌ ವಿಭಾಗದವರು ಎಂದು ತಿಳಿದುಬಂದಿದೆ. ರೈಲು ದುರಂತದಲ್ಲಿ ಮೃತಪಟ್ಟ ಕಾರಣ ಸೋಮನಾಥ್‌ ಉತ್ತಮ್‌ ಲಂಬುತ್ರೆ ಹಾಗೂ ಸಚಿನ್‌ ವಾಂಖೇಡೆ ಅವರಿಗೆ ತಲಾ 40 ಲಕ್ಷ ರೂ. ಮತ್ತು ವಾಸು ಮಿತ್ರ ಅವರಿಗೆ 1.24 ಕೋಟಿ ರೂ. ಪರಿಹಾರ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Viral Video: ಇನ್ನೆಂದೂ ಕಳವು ಮಾಡದಂತೆ ರೈಲು ಪ್ರಯಾಣಿಕರು ಖದೀಮನಿಗೆ ಪಾಠ ಕಲಿಸಿದ್ದು ಹೀಗೆ

ಕಳೆದ ಕೆಲ ತಿಂಗಳ ಹಿಂದೆ ತಮಿಳುನಾಡಿನ ಚೆಂಗಲ್‌ಪಟ್ಟು ಜಿಲ್ಲೆಯಲ್ಲಿ ರೈಲು ಹರಿದು ಕರ್ನಾಟಕದ ಮೂವರು ಬಾಲಕರು ಮೃತಪಟ್ಟಿದ್ದರು. ಜಿಲ್ಲೆಯ ಹೊರವಲಯದ ಊರಪಕ್ಕಂ ಬಳಿ ಮೂವರು ಬಾಲಕರು ರೈಲು ಹಳಿ ದಾಟುವಾಗ ವೇಗವಾಗಿ ಬಂದ ರೈಲು ಅವರ ಮೇಲೆ ಹರಿದಿತ್ತು. ಮೂವರು ಬಾಲಕರು ಕೂಡ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮೂವರು ಬಾಲಕರು ಕೂಡ ವಿಶೇಷ ಚೇತನರಾಗಿದ್ದಾರೆ. ಸುರೇಶ್‌ಗೆ (15) ಕಿವಿ ಕೇಳಿಸುತ್ತಿರಲಿಲ್ಲ. ರವಿಗೆ (10) ಮಾತು ಬರುತ್ತಿರಲಿಲ್ಲ. ಹಾಗೆಯೇ, 10 ವರ್ಷದ ಮಂಜುನಾಥ್‌ಗೂ ಕಿವಿ ಕೇಳಿಸುತ್ತಿರಲಿಲ್ಲ. ಇವರಿಗೆ ಕಿವಿ ಕೇಳಿಸದಿರುವುದೇ ದುರಂತಕ್ಕೆ ಕಾರಣ ಎನ್ನಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version