ಶ್ರೀನಗರ: ಜಮ್ಮು-ಕಾಶ್ಮೀರದ ಪಂಜತೀರ್ಥ-ಸಿದ್ರಾ ರಸ್ತೆಯಲ್ಲಿ ಇಂದು ಬೆಳಗ್ಗೆ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆ ಸಿಬ್ಬಂದಿ ಹತ್ಯೆಗೈದಿದ್ದಾರೆ. ಮುಂಜಾನೆಯಿಂದಲೂ ಭದ್ರತಾ ಪಡೆ ಸಿಬ್ಬಂದಿ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆಯುತ್ತಿತ್ತು. ಆ ಸ್ಥಳದಲ್ಲಿ ಗ್ರೆನೇಡ್ ಸ್ಫೋಟವೂ ಆಗಿದೆ. ಸದ್ಯ ಸ್ಥಳದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
‘ಪಂಜತೀರ್ಥ-ಸಿದ್ರಾ ರಸ್ತೆಯಲ್ಲಿ ಟ್ರಕ್ವೊಂದು ತೀರ ಅಸಹಜ ಎಂಬಂತೆ ಚಲಿಸುತ್ತಿತ್ತು. ಆ ಲಾರಿ ಹೋಗುತ್ತಿದ್ದ ವಿಧಾನ ನೋಡಿ ಅನುಮಾನಗೊಂಡು ಅದನ್ನು ಹಿಂಬಾಲಿಸಿದೆವು. ನಾವು ಬೆನ್ನಟ್ಟಿದ್ದು ಟ್ರಕ್ ಡ್ರೈವರ್ಗೆ ಗೊತ್ತಾಯಿತು. ಸಿದ್ರಾ ಬಳಿ ರಸ್ತೆ ಪಕ್ಕ ಕಾಡಿರುವ ಜಾಗದಲ್ಲಿ ವಾಹನ ನಿಲ್ಲಿಸಿದ ಅವನು, ಓಡಿಹೋದ. ನಾವು ಟ್ರಕ್ನೊಳಗೆ ಪರಿಶೀಲನೆ ನಡೆಸಿದಾಗ ಅದರಲ್ಲಿ ಮೂವರು ಉಗ್ರರು ಅಡಗಿದ್ದರು. ನಮ್ಮ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದರು. ಈ ವೇಳೆ ನಾವೂ ತಿರುಗಿ ಫೈರಿಂಗ್ ಮಾಡಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಮುಕೇಶ್ ಸಿಂಗ್ ತಿಳಿಸಿದ್ದಾರೆ. ತಪ್ಪಿಸಿಕೊಂಡ ಟ್ರಕ್ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ.
ಜಮ್ಮು-ಕಾಶ್ಮೀರದ ಉದಾಂಪುರ ಜಿಲ್ಲೆಯಲ್ಲಿ ಸೋಮವಾರ ಪೊಲೀಸರು 15 ಕೆಜಿಗಳಷ್ಟು ಐಇಡಿ (ಸುಧಾರಿತ ಸ್ಫೋಟಕ ಸಾಧನ)ವನ್ನು ವಶಪಡಿಸಿಕೊಂಡಿದ್ದರು. ಲಷ್ಕರೆ ತೊಯ್ಬಾ ಭಯೋತ್ಪಾದಕ ಸಂಘಟನೆಯ ಕೋಡ್ ಇರುವ ಶೀಟ್ ಮತ್ತು ಒಂದು ಪತ್ರವೂ ಆ ಸ್ಥಳದಲ್ಲಿ ಸಿಕ್ಕಿತ್ತು. ಪ್ರಕರಣದ ಸಂಬಂಧ ಶಂಕಿತನೊಬ್ಬನನ್ನು ಬಂಧಿಸಿದ್ದರು. ಈ ಮೂಲಕ ಉಗ್ರರು ಯೋಜನೆ ಹಾಕಿದ್ದ ದೊಡ್ಡಮಟ್ಟದ ದಾಳಿಯೊಂದನ್ನು ಪೊಲೀಸರು ವಿಫಲಗೊಳಿಸಿದ್ದರು. ಅದರ ಬೆನ್ನಲ್ಲೇ ಈ ಎನ್ಕೌಂಟರ್ ನಡೆದಿದೆ.
ಇದನ್ನೂ ಓದಿ: Terror Alert | ಮುಂಬೈ ಮಾದರಿಯಲ್ಲಿ ಉಗ್ರ ದಾಳಿ ಶಂಕೆ; ಮಂಗಳೂರಲ್ಲಿ ಹೈ ಅಲರ್ಟ್!