Site icon Vistara News

Fake News: ವಾಟ್ಸ್‌ಆ್ಯಪ್‌ನಲ್ಲಿ ಸಿಕ್ಕಿದ್ದೆಲ್ಲ ಫಾರ್ವರ್ಡ್‌ ಮಾಡಿದರೆ 3 ವರ್ಷ ಜೈಲು; ಹೊಸ ಕಾನೂನು ಬಗ್ಗೆ ಇರಲಿ ಎಚ್ಚರಿಕೆ

New Law To Curb Fake News

3 Years Jail For Spreading Fake News, Says New Proposed Criminal Bill

ನವದೆಹಲಿ: ವಾಟ್ಸ್‌ಆ್ಯಪ್ ಗ್ರೂಪ್‌ ನೋಡುತ್ತ ಕುಳಿತಿರುತ್ತೀರಿ. ಯಾವುದೋ ಒಂದು ಮೆಸೇಜ್‌ ಅಥವಾ ವಿಡಿಯೊ ಬಂದು ಗ್ರೂಪ್‌ನಲ್ಲಿ ಬೆಚ್ಚಗೆ ಕುಳಿತುಕೊಳ್ಳುತ್ತದೆ. ಅದನ್ನು ನೋಡಿದ ನೀವು, ಹಿಂದೆ ಮುಂದೆ ನೋಡದೆ ಬೇರೆಯವರಿಗೆ ಫಾರ್ವರ್ಡ್‌ ಮಾಡುತ್ತೀರಿ. ಆ ಸುದ್ದಿ ನಿಜ ಎಂದೇ ನೀವು ಭಾವಿಸಿರುತ್ತೀರಿ. ಆದರೆ, ಇನ್ನು ಮುಂದೆ ಹೀಗೆ ಮಾಡುವ ಮುನ್ನ ಎಚ್ಚರಿಕೆಯಿಂದ ಇರಿ. ಹೊಸ ಕಾನೂನು (Criminal Laws) ಜಾರಿಯಾದರೆ, ವಾಟ್ಸ್‌ಆ್ಯಪ್ ಸೇರಿ ಯಾವುದೇ ಮಾಧ್ಯಮದ ಮೂಲಕ ನಕಲಿ ಸುದ್ದಿ (Fake News) ಹರಡುವವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಹೌದು, ಕೇಂದ್ರ ಸರ್ಕಾರವು ಭಾರತೀಯ ದಂಡ ಸಂಹಿತೆ (IPC) ಸೇರಿ ವಸಾಹತು ಕಾಲದ ಮೂರು ಕ್ರಿಮಿನಲ್‌ ಕಾನೂನುಗಳನ್ನು ಬದಲಿಸಲು ತೀರ್ಮಾನಿಸಿದೆ. ಅದಕ್ಕಾಗಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಂಸತ್ತಿನಲ್ಲಿ ಮೂರು ವಿಧೇಯಕಗಳನ್ನು ಮಂಡಿಸಿದ್ದಾರೆ. ಐಪಿಸಿ ಇನ್ನುಮುಂದೆ ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita Bill 2023) ಆಗಲಿದೆ. ಹೊಸ ಕಾನೂನಿನ ಅಡಿಯಲ್ಲಿ ನಕಲಿ ಸುದ್ದಿ ಹರಡುವವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಪ್ರಸ್ತಾಪಿತ ವಿಧೇಯಕದ ನಿಬಂಧನೆಗಳು

ನೂತನ ಕಾನೂನಿನ ಸೆಕ್ಷನ್‌ 195 (1) D ಪ್ರಕಾರ, “ದೇಶದ ಸಾರ್ವಭೌಮತ್ವ, ಸಮಗ್ರತೆ ಹಾಗೂ ಭದ್ರತೆಗೆ ಧಕ್ಕೆ ತರುವ ಯಾವುದೇ ನಕಲಿ ಸುದ್ದಿಯನ್ನು ಪಸರಿಸಿದರೆ, ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಅವರಿಗೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ, ದಂಡ ಹಾಗೂ ಕೆಲವು ಪ್ರಕರಣಗಳಲ್ಲಿ ಎರಡನ್ನೂ ವಿಧಿಸಲಾಗುತ್ತದೆ” ಎಂದು ಉಲ್ಲೇಖಿಸಲಾಗಿದೆ. ಇದನ್ನು ವಿಧೇಯಕದ ಚಾಪ್ಟರ್‌ 11ರಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ: Love Jihad: ಹೊಸ ಕಾನೂನಿನಲ್ಲಿ ಲವ್‌ ಜಿಹಾದ್‌ಗೆ ಬ್ರೇಕ್‌; ನಕಲಿ ಐಡೆಂಟಿಟಿ ತೋರಿಸಿ ಮದುವೆಯಾದರೆ ಜೈಲು ಗ್ಯಾರಂಟಿ

ಮೂರು ವಿಧೇಯಕ ಯಾವವು?

ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗುತ್ತಿದ್ದು, ಇವುಗಳನ್ನು ಸಂಸದೀಯ ಸಮಿತಿಯ ಪರಿಶೀಲನೆಗಾಗಿ ಕಳುಹಿಸಲಾಗುತ್ತಿದೆ ಎಂದು ಅಮಿತ್‌ ಶಾ ಮಾಹಿತಿ ನೀಡಿದ್ದಾರೆ. ಸಮಿತಿ ಪರಿಶೀಲನೆ ಬಳಿಕ ವಿಧೇಯಕಗಳಿಗೆ ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರ ದೊರೆತರೆ ಮೂರೂ ಕಾನೂನುಗಳು ಜಾರಿಗೆ ಬರಲಿವೆ. ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಜೀವಾವಧಿ, ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ಸೇರಿ ಹಲವು ಬದಲಾವಣೆ ಮಾಡಲಾಗಿದೆ.

Exit mobile version