ನವದೆಹಲಿ: ಮಾನವ ಕಳ್ಳಸಾಗಣೆ (Human Trafficking) ಶಂಕೆಯ ಮೇಲೆ ವಿಮಾನವನ್ನು ವಶಕ್ಕೆ ಪಡೆದ ನಂತರ ಫ್ರಾನ್ಸ್ನಲ್ಲಿ ಸಿಲುಕಿದ್ದ 303 ಭಾರತೀಯ ನಾಗರಿಕರಿಗೆ ಆ ದೇಶದಿಂದ ಹೊರಹೋಗಲು ಫ್ರೆಂಚ್ ನ್ಯಾಯಾಧೀಶರಿಂದ ಅನುಮತಿ ಸಿಕ್ಕಿದೆ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ಉನ್ನತ ಮೂಲಗಳು ತಿಳಿಸಿವೆ. ಫ್ರೆಂಚ್ ಪ್ರಾಸಿಕ್ಯೂಟರ್ ಗಳು ಮತ್ತು ನ್ಯಾಯಾಧೀಶರು ಭಾರತೀಯರು ಆದಷ್ಟು ಬೇಗ ಹಿಂತಿರುಗಬೇಕೆಂದು ಹೇಳಿದ್ದಾರೆ. ಅವರು ಡಿಸೆಂಬರ್ 26 ರಂದು ಭಾರತಕ್ಕೆ ಬರುವ ಸಾಧ್ಯತೆಗಳಿವೆ. ಅವರು ಭಾರತಕ್ಕೆ ಹೋಗುತ್ತಾರೆಯೇ ಅಥವಾ ಯುಎಇಗೆ ಹೋಗುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಆ ಚಾರ್ಟರ್ಡ್ ವಿಮಾನಕ್ಕೆ ಸಂಬಂಧಿಸಿದ ಪ್ರಯಾಣಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ವಿಮಾನಕ್ಕೆ ದುಬೈಗೆ ಹಾರಲು ಮಾತ್ರ ಅನುಮತಿ ಇದೆ. ಭಾರತಕ್ಕೆ ಬರಲು ಅನುಮತಿ ಇಲ್ಲ. ಹೀಗಾಗಿ ಫ್ರಾನ್ಸ್ನಿಂದ ಹೊರಗೆ ಪ್ರಯಾಣಿಸಲು ಎರಡು ಯೋಜನೆಗಳನ್ನು ರೂಪಿಸಲಾಗಿದೆ ಎನ್ನಲಾಗಿದೆ.
ಒಂದು ಯೋಜನೆ ಪ್ರಕಾರ ಭಾರತೀಯರು ಒಂದೇ ವಿಮಾನದಲ್ಲಿ ಯುಎಇಗೆ ಹೋಗುತ್ತಾರೆ. ಎರಡನೇ ಆಯ್ಕೆಯು ಏರ್ ಇಂಡಿಯಾ ವಿಮಾನದ ಮೂಲಕ ಕಳುಹಿಸುವುದು. ಅದಲ್ಲದಿದ್ದರೆ ರೊಮೇನಿಯನ್ ವಿಮಾನದ ಮೂಲಕ ನೇರವಾಗಿ ಭಾರತಕ್ಕೆ ಕಳುಹಿಸಲು ಯೋಜನೆ ರೂಪಿಸಲಾಗಿದೆ. ಈ ವೇಳೆ ವಾರ್ಟಿ ವಿಮಾನ ನಿಲ್ದಾಣದಿಂದ ರಾಜಧಾನಿ ಪ್ಯಾರಿಸ್ಗೆ ಲಗೇಜ್ ಸಾಗಿಸುವುದು ಕೂಡ ಸಮಸ್ಯೆಯಾಗಿದೆ. ಎಲ್ಲರನ್ನೂ ಭಾರತಕ್ಕೆ ಗಡೀಪಾರು ಮಾಡಲು ಭಾರತೀಯ ರಾಯಭಾರ ಕಚೇರಿ ಶಿಫಾರಸು ಮಾಡಿದೆ ಎಂದು ವಿದೇಶಾಂಗ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.
ದುಬೈನಿಂದ 303 ಭಾರತೀಯ ಪ್ರಯಾಣಿಕರನ್ನು ಹೊತ್ತ ನಿಕರಾಗುವಾಗೆ ತೆರಳುತ್ತಿದ್ದ ವಿಮಾನವನ್ನು ಇಂಧನ ತುಂಬಿಸಲು ಫ್ರಾನ್ಸ್ನ ವಾಟ್ರಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.
ಅಮೆರಿಕ ಪ್ರವೇಶಿಸುವ ಹುನ್ನಾರ
ಸರ್ಕಾರಿ ಮೂಲಗಳ ಪ್ರಕಾರ, ಪಂಜಾಬ್ ಮತ್ತು ಗುಜರಾತ್ನ ಗ್ರಾಮಸ್ಥರು ನಿಕರಾಗುವಾ ಮೂಲಕ ಅಮೆರಿಕ ಪ್ರವೇಶಿಸಲು ಬಯಸಿದ್ದರು ಎಂದು ನಂಬಲಾಗಿದೆ. ಕಾನ್ಸುಲೇಟ್ ಕಚೇರಿ ಬಳಿ ಜಮಾಯಿಸಿದ ಅವರಲ್ಲಿ ಗುಜರಾತಿ ಮತ್ತು ಪಂಜಾಬಿ ಭಾಷೆ ಮಾತನಾಡುವವರೇ ಹೆಚ್ಚು ಕಂಡು ಬಂದಿದ್ದರು. ಅವರು ಪ್ರವಾಸಕ್ಕಾಗ ಹೋಗುತ್ತಿದ್ದಾರೆ ಎಂದು ಅವರ ಕಡೆಯಿಂದ ಹೇಳಿಸಲಾಗಿತ್ತು.
ಇದನ್ನೂ ಓದಿ : Khalistan Terrorists: ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ಹಿಂದೂ ದೇವಾಲಯ ವಿರೂಪ, ಭಾರತ ತೀವ್ರ ಖಂಡನೆ
ಮೆಕ್ಸಿಕನ್ ಭಾಗದಿಂದ ಪ್ರವೇಶ ಮುಚ್ಚಿದ ನಂತರ ನಿಕರಾಗುವಾ ಮೂಲಕ ಕಾನೂನು ಬಾಹಿರವಾಗಿ ಅಮೆರಿಕ ಪ್ರವೇಶಿಸುವುದು ಸಾಮಾನ್ಯ ಎನಿಸಿದೆ. ವರದಿಯ ಪ್ರಕಾರ, ವಿಮಾನದಲ್ಲಿದ್ದ ಪ್ರಯಾಣಿಕರ ಬಗ್ಗೆ ಅನಾಮಧೇಯ ಸುಳಿವು ನೀಡಿದ ನಂತರ ವಿಮಾನವನ್ನು ಗುರುವಾರ ವಶಕ್ಕೆ ತೆಗೆದುಕೊಳ್ಳಲಾಗಿತ್ತು.