ಚಂಡೀಗಢ: ಸಾಕು ನಾಯಿಗಳು ಎಷ್ಟು ಮನುಷ್ಯನಿಗೆ ಹತ್ತಿರವೋ, ಬೀದಿ ನಾಯಿಗಳು (Stray Dogs) ಅಷ್ಟೇ ಅಪಾಯಕಾರಿಯಾಗಿವೆ. ದೇಶದ ನೂರಾರು ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ, ಜನರ ಮೇಲೆ ದಾಳಿ ನಡೆಸಿದ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಪಂಜಾಬ್‌ನ (Punjab) ಕಪುರ್ತಲಾ (Kapurthala) ಜಿಲ್ಲೆಯಲ್ಲಿ ಒಂಟಿ ಮಹಿಳೆ ಮೇಲೆ ಸುಮಾರು 20 ಬೀದಿ ನಾಯಿಗಳು ದಾಳಿ ನಡೆಸಿವೆ. ಮಹಿಳೆಯನ್ನು ಮನಸೋ ಇಚ್ಛೆ ಕಚ್ಚಿದ ಕಾರಣ ಆಕೆ ಮೃತಪಟ್ಟಿದ್ದಾರೆ.
ಸುಲ್ತಾನ್‌ಪುರ ಲೋಧಿ ಪಟ್ಟಣ ವ್ಯಾಪ್ತಿಯ ಪಸ್ಸಾನ್ ಕದಿಮ್ ಗ್ರಾಮದ ನಿವಾಸಿಯಾದ ಪರಿ ದೇವಿ (32) ಎಂಬ ಮಹಿಳೆಯು ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದಾರೆ. ಕಳೆದ ಮಂಗಳವಾರ (ಫೆಬ್ರವರಿ 6) ಸಂಜೆ ಹಸುಗಳನ್ನು ಮೇಯಿಸಿಕೊಂಡು ಮನಗೆ ಹಿಂತಿರುಗುವ ವೇಳೆ 20 ಬೀದಿ ನಾಯಿಗಳು ದಾಳಿ ನಡೆಸಿವೆ. ರಾತ್ರಿ 10 ಗಂಟೆಯಾದರೂ ಮಹಿಳೆ ಮನೆಗೆ ವಾಪಸಾಗದ ಕಾರಣ ಕುಟುಂಬಸ್ಥರು ಜಮೀನಿಗೆ ಹೋಗಿ ಪರಿಶೀಲಿಸಿದ್ದಾರೆ. ಆಗ, ಮಹಿಳೆಯ ಶವ ಪತ್ತೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಪಸ್ಸಾನ್ ಕದಿಮ್ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ. ಇತ್ತೀಚೆಗಷ್ಟೇ, ಇದೇ ಗ್ರಾಮದ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು. ಗಾಯಗೊಂಡಿರುವ ಮಹಿಳೆ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೀದಿ ನಾಯಿಗಳ ಹಾವಳಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ ಕಾರಣ ಡೆಪ್ಯುಟಿ ಕಮಿಷನರ್ ಅಮಿತ್ ಕುಮಾರ್ ಪಂಚಾಲ್ ಅವರು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಶೀಘ್ರದಲ್ಲೇ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತನಿಗೆ ನಾಯಿ ಬಿಸ್ಕೆಟ್! ರಾಹುಲ್ ಗಾಂಧಿ ಕೊಟ್ಟ ಸ್ಪಷ್ಟೀಕರಣ ಹೀಗಿದೆ
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಿಹಾಳ ಗ್ರಾಮದಲ್ಲಿ ಬೀದಿ ನಾಯಿಗಳು ಹಸುಗೂಸನ್ನು ತಿಂದುಹಾಕಿದ್ದವು. ಡಿ.21ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ದೇವಿಹಾಳ ಗ್ರಾಮದ ರತ್ನಮ್ಮ ಬಡ್ನಿ ಎಂಬುವವರ ದುರಸ್ತಿ ಮನೆಯ ಹತ್ತಿರ ನವಜಾತ ಶಿಶುವನ್ನು ಎಸೆದು ಹೋಗಿದ್ದರು. ಅನೈತಿಕ ಸಂಬಂಧದಿಂದ ಜನಿಸಿದ ಮಗು ಎಂದು ಹೇಳಲಾಗಿತ್ತು. ಅನೈತಿಕ ಸಂಬಂಧಕ್ಕೆ ಈ ಮಗು ಜನಿಸಿದ್ದು, ತಮ್ಮ ಸಂಬಂಧವನ್ನು ಮುಚ್ಚಿಡಲು ಸಲುವಾಗಿ ಹುಟ್ಟಿದ ಮಗುವನ್ನು ಎಸೆದು ಹೋಗಿದ್ದಾರೆ ಎಂದು ದೂರು ನೀಡಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ