ನವದೆಹಲಿ: ದೇಶಾದ್ಯಂತ ಕಳೆದ ಮೂರು ತಿಂಗಳಿಂದ ಹೆಚ್ಚಿನ ಜನ ಜ್ವರ, ಶೀತ, ಮೈಕೈ ನೋವು, ಕೆಮ್ಮಿನಿಂದ ಬಳಲುತ್ತಿರುವುದಕ್ಕೆ ಎಚ್3ಎನ್2 ಸೋಂಕಿನ ಉಪತಳಿಯೇ ಕಾರಣ ಎಂದು ತಜ್ಞರು ಹೇಳಿದ ಬೆನ್ನಲ್ಲೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೆಲ ದಿನಗಳಿಂದ ಏರಿಕೆಯಾಗುತ್ತಿರುವುದು (Coronavirus Cases Rise) ಆತಂಕ ಮೂಡಿಸಿದೆ. ಕರ್ನಾಟಕದಲ್ಲಿಯೇ 95 ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 324 ಕೇಸ್ ದಾಖಲಾಗಿದ್ದು, ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 2,791ಕ್ಕೆ ಏರಿಕೆಯಾಗಿದೆ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ ಕೆಲವು ದಿನಗಳಲ್ಲಿಯೇ ನಿತ್ಯ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಜನರಲ್ಲಿ ಆತಂಕ ಹೆಚ್ಚಾಗಿದೆ.
ಫೆಬ್ರವರಿ 27ರಂದು ನಿತ್ಯ ಸೋಂಕಿತರ ಸಂಖ್ಯೆ 185 ಇತ್ತು. ಫೆಬ್ರವರಿ 28ರಂದು ಕೇವಲ 169 ಮಂದಿಗೆ ಸೋಂಕು ತಗುಲಿತ್ತು. ಆದರೆ, ಮಾರ್ಚ್ 1ರಂದು 240, ಮಾರ್ಚ್ 2ರಂದು 268, 3ರಂದು 283 ಹಾಗೂ 4ರಂದು 334 ಕೇಸ್ ದಾಖಲಾಗಿವೆ. ಹೀಗೆ ನಿತ್ಯ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಆತಂಕ ಹೆಚ್ಚಾಗಿದೆ. ಕಳೆದ ವಾರ ನಿತ್ಯ ಸೋಂಕಿತರ ಸರಾಸರಿ ಸಂಖ್ಯೆ 177 ಆಗಿದ್ದರೆ, ಆ ವಾರ ಅದು 240 ದಾಟಿದೆ.
ಇದನ್ನೂ ಓದಿ: Unemployment Rate: ದೇಶದಲ್ಲಿ ನಿರುದ್ಯೋಗ ಪ್ರಮಾಣ 5 ವರ್ಷದಲ್ಲೇ ಕನಿಷ್ಠ, ಕೊರೊನಾ ಬಳಿಕ ಚೇತರಿಕೆ