Site icon Vistara News

Cloud Burst: ಹಿಮಾಚಲದ ಮೇಘಸ್ಫೋಟಕ್ಕೆ 50 ಸಾವು, ಪ್ರವಾಹದಲ್ಲಿ ಕೊಚ್ಚಿ ಹೋದ 7 ಮಂದಿ!

Cloud Burt in Himachal pradesh

ನವದೆಹಲಿ: ಹಿಮಾಚಲ ಪ್ರದೇಶ (Himachal Pradesh) ಹಾಗೂ ಉತ್ತರಾಖಂಡದಲ್ಲಿ (Uttarakhand State) ಸಂಭವಿಸುತ್ತಿರುವ ಮೇಘ ಸ್ಫೋಟ (Cloud Burst) ಮತ್ತು ಭೂಕುಸಿತ(Land Slide)ಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿ ಘಟನೆಗಳಲ್ಲಿ ಕಳೆದ 24 ಗಂಟೆಗಳಲ್ಲಿ 50 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಏಳು ಜನರು ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು (Chief Minister Sukhvinder Singh Sukhu) ಅವರು ಮಂಡಿ ಜಿಲ್ಲೆಯ (Mandi District) ಸಂಬಾಲ್ ಗ್ರಾಮದ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ಭಯಾನಕ ಪರಿಸ್ಥಿತಿಯನ್ನು ನಿಯಂತ್ರಿಸಲು ರಕ್ಷಣೆ, ಶೋಧ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಗುಡ್ಡಗಾಡು ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ ಕಳೆದ ಎರಡು ದಿನಗಳಲ್ಲಿ 50 ಜನರು ಮೃತಪಟ್ಟಿದ್ದಾರೆ ಎಂದು ಹೇಳಿದೆ.

ಮಂಡಿ ಜಿಲ್ಲೆಯ ಸಂಭಾಲ್, ಪಾಂಡೋಹ್ ದೃಶ್ಯಗಳು ಮನಸ್ಸಿಗೆ ಘಾಸಿ ಮಾಡುವಂತಿವೆ. ಏಳು ವ್ಯಕ್ತಿಗಳು ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿದ್ದಾರೆ ಎಂದು ಮುಖ್ಯಮಂತ್ರಿ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಸಂತ್ರಸ್ತರ ರಕ್ಷಣೆ, ಶೋಧನೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. ಬೆಟ್ಟದಿಂದ ನೀರು ವೇಗವಾಗಿ ಕೆಳಗೆ ಧುಮ್ಮುಕುತ್ತಿರುವ ದೃಶ್ಯಗಳನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ಮೊದಲು ಭಾರೀ ಮಳೆಗೆ ಸಂಬಂಧಿಸಿದಂತೆ ಪ್ರತ್ಯೇಕ ಘಟನೆಗಳಲ್ಲಿ 16 ಜನರು ಮೃತಪಟ್ಟಿದ್ದರು. ಕಳೆದ ರಾತ್ರಿ ಸೋಲಾನ್ ಜಿಲ್ಲೆಯಲ್ಲಿ ಸಂಭವಿಸಿದ ಮೇಘ ಸ್ಫೋಟದಿಂದಾಗಿ 7 ಜನರು ಮೃತಪಟ್ಟಿದ್ದಾರೆ. ಶಿಮ್ಲಾ ಸಿಟಿಯ ಸಮ್ಮರ್ ಹಿಲ್‌ನಲ್ಲಿರುವ ಶಿವ ಟೆಂಪಲ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 9 ಜನರು ಮೃತಪಟ್ಟಿದ್ದರು.

ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ

ಮಳೆ ಪೀಡಿತ ಹಿಮಾಚಲ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಮತ್ತು ಪ್ರವಾಹದಿಂದಾಗಿ ಜೀವಹಾನಿಯನ್ನು “ಅತ್ಯಂತ ದುಃಖಕರ” ಎಂದು ಅವರು ಬಣ್ಣಿಸಿದ್ದಾರೆ.

ಪ್ರವಾಸಕ್ಕೆ ಬರದಂತೆ ಸಿಎಂ ಮನವಿ

ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು, ಜನರು ಮನೆಯೊಳಗೆ ಇರುವಂತೆ ಮನವಿ ಮಾಡಿದದಾರೆ. ಚರಂಡಿ ಅಥವಾ ನದಿಗಳ ಬಳಿ ಹೋಗದಂತೆ ಮನವಿ ಮಾಡಿದ್ದಾರೆ. ಭೂಕುಸಿತ ಪೀಡಿತ ಪ್ರದೇಶಗಳಿಂದ ದೂರ ಹೋಗುವಂತೆ ಜನರನ್ನು ಮನವಿ ಮಾಡಿದರು. ಹಿಮಾಚಲ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಮಳೆ ಸುರಿಯುತ್ತಿರುವುದರಿಂದ ಪ್ರವಾಸಿಗರು ರಾಜ್ಯಕ್ಕೆ ಭೇಟಿ ನೀಡಬಾರದು ಎಂದು ಕೇಳಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Himachal Pradesh: ಹಿಮಾಚಲದಲ್ಲಿ ಮೇಘಸ್ಫೋಟಕ್ಕೆ ಏಳು ಜನ ಬಲಿ; ಪ್ರವಾಹಕ್ಕೆ ಕೊಚ್ಚಿಹೋದ ಬದುಕು

15ರಿಂದ 20 ಜನರ ಸಮಾಧಿ!

ಶಿಮ್ಲಾ ನಗರದಲ್ಲಿ ಸಂಭವಿಸಿದ ಎರಡು ಭೂಕುಸಿತಗಳಲ್ಲಿ 15 ರಿಂದ 20 ಮಂದಿ ಸಮಾಧಿಯಾಗಿರುವ ಶಂಕೆ ಇದೆ ಎಂದು ಶಿಮ್ಲಾದ ಡೆಪ್ಯುಟಿ ಕಮಿಷನರ್ ಆದಿತ್ಯ ನೇಗಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಇನ್ನೊಂದು ಪ್ರದೇಶದಲ್ಲೂ ಇದೇ ರೀತಿ ಭೂಕುಸಿತ ಸಂಭವಿಸಿದ್ದು, ಅಲ್ಲೂ ಜನರು ಸಮಾಧಿಯಾಗಿರುವ ಸಾಧ್ಯತೆಗಳಿವೆ ಎಂದು ತಿಳಿಸಿದೆ. ಸೋಲಾನ್ ಜಿಲ್ಲೆಯ ಕಂದಘಾಟ್ ವಿಭಾಗದ ಮಾಮಲಿಗ್ ಹಳ್ಳಿಯಲ್ಲಿ ಸಂಭವಿಸಿದ ಮೇಘ ಸ್ಫೋಟದಲ್ಲಿ 6 ಜನರನ್ನು ರಕ್ಷಣೆ ಮಾಡಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version