ಲಖನೌ: ಪಾಕಿಸ್ತಾನದ ಕರಾಚಿ ಮೂಲಕ ಗುಜರಾತ್ ಪ್ರವೇಶಿಸಿರುವ ಬಿಪರ್‌ಜಾಯ್ ಚಂಡಮಾರುತವು ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ನೂರಾರು ಮನೆಗಳು ಕುಸಿದಿವೆ. ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಸೇರಿ ಹಲವೆಡೆ ಭಾರಿ ಮಳೆಯಾಗುತ್ತಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಹೀಗೆ, ಬಿಪರ್‌ಜಾಯ್ ಚಂಡಮಾರುತವು ಹಲವು ಅವಾಂತರ ಸೃಷ್ಟಿಸಿದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಉಷ್ಣಮಾರುತಕ್ಕೆ (Heat Wave) 48 ಗಂಟೆಯಲ್ಲಿಯೇ 32 ಜನ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಬಲಿಯಾ ಜಿಲ್ಲಾಸ್ಪತ್ರೆಯೊಂದರಲ್ಲಿಯೇ 34 ಜನ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನ ಜನ 60 ವರ್ಷ ದಾಟಿದವರಾಗಿದ್ದು, ಅತಿಯಾದ ಉಷ್ಣ ತಾಳದೆ ಇವರು ಮೃತಪಟ್ಟಿದ್ದಾರೆ. “ಹಿರಿಯ ನಾಗರಿಕರನ್ನು ಉಷ್ಣದ ಗಾಳಿಯು ಬಾಧಿಸುತ್ತಿದೆ. ಅತಿಯಾದ ಸೆಕೆ ತಾಳದೆ ಜಿಲ್ಲಾಸ್ಪತ್ರೆಯಲ್ಲಿ 34 ಜನ ಮೃತಪಟ್ಟಿದ್ದಾರೆ. ಜಿಲ್ಲಾದ್ಯಂತ ಉಷ್ಣ ಮಾರುತದ ಪರಿಣಾಮ ಭೀಕರವಾಗಿದೆ” ಎಂದು ಚೀಫ್ ಮೆಡಿಕಲ್ ಆಫಿಸರ್ ಡಾ.ಜಯಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
“ಉಷ್ಣಮಾರುತದ ತೀವ್ರತೆ ಜಾಸ್ತಿಯಾಗುತ್ತಿರುವ ಕಾರಣ ಬಲಿಯಾ ಜಿಲ್ಲೆಯಲ್ಲಿ ಹಿರಿಯ ನಾಗರಿಕರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುವುದು ಹೆಚ್ಚಾಗಿದೆ. ಕೆಲ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರು ಅತಿಯಾದ ಉಷ್ಣ ತಾಳದೆ ಮೃತಪಡುತ್ತಿದ್ದಾರೆ. ಬಲಿಯಾ ಜಿಲ್ಲಾಸ್ಪತ್ರೆಯಲ್ಲಿ ಜೂನ್ 15ರಂದು 23 ಜನ ಮೃತಪಟ್ಟರೆ, ಜೂನ್ 16ರಂದು 11 ಮಂದಿ ಸಾವಿಗೀಡಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಉಷ್ಣಮಾರುತದ ಹೊಡೆತಕ್ಕೆ ಜನ ಸಾವಿಗೀಡಾದ ಕುರಿತು ಜನರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಆಸ್ಪತ್ರೆಯ ವಾರ್ಡ್‌ಗಳಿಗೆ ಕೂಲರ್ ಪೂರೈಕೆ, ಎಸಿ ಅಳವಡಿಕೆ ಮಾಡಲಾಗಿದೆ. ಉತ್ತರ ಪ್ರದೇಶದ 22 ಜಿಲ್ಲೆಗಳಲ್ಲಿ ಬಿಸಿ ಗಾಳಿಯ ಪರಿಣಾಮ ಹೆಚ್ಚಾಗಿದೆ. ಬಲಿಯಾ ಜಿಲ್ಲೆಯಲ್ಲಿ ತಾಪಮಾನವು ಶುಕ್ರವಾರ 42.2 ಡಿಗ್ರಿ ಸೆಲ್ಸಿಯಸ್ ಇದೆ. ಇದು ಸಾಮಾನ್ಯ ತಾಪಮಾನಕ್ಕಿಂತ 4.7 ಡಿಗ್ರಿ ಸೆಲ್ಸಿಯಸ್ ಜಾಸ್ತಿಯಾಗಿದೆ.
ಇದನ್ನೂ ಓದಿ: Cyclone Biparjoy: ಬಿಪರ್‌ಜಾಯ್ ಅಬ್ಬರ; ಪ್ರವಾಹದಲ್ಲಿ ಸಿಲುಕಿದ ಮೇಕೆ ರಕ್ಷಿಸಲು ಹೋಗಿ ತಂದೆ-ಮಗ ಸಾವು
ಬಿಪರ್‌ಜಾಯ್ ಚಂಡಮಾರುತದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ತಾಪಮಾನ ಕಡಿಮೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಚಂಡಮಾರುತ ತೀವ್ರತೆ ಜಾಸ್ತಿ ಇರದ ಕಾರಣ ಹಾಗೂ ಮುಂಗಾರು ವಿಳಂಬವಾದ ಕಾರಣ ಉತ್ತರ ಪ್ರದೇಶದಲ್ಲಿ ಉಷ್ಣಮಾರುತ ತೀವ್ರವಾಗಿದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ