Site icon Vistara News

Ram Mandir: 150 ಕಿ.ಮೀ ನಡೆದು ರಾಮಮಂದಿರ ದರ್ಶನ ಪಡೆದ 350 ಮುಸ್ಲಿಮರು; Video ಇದೆ

Muslims In Ayodhya

350 Muslims Undertake 6-Days Foot March To Ayodhya From Lucknow

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು (Ram Mandir) ಜನವರಿ 22ರಂದು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಇದು ರಾಷ್ಟ್ರಮಂದಿರ ಎಂದಿದ್ದರು. ನರೇಂದ್ರ ಮೋದಿ ಅವರ ಮಾತಿಗೆ ನಿದರ್ಶನ ಎಂಬಂತೆ ನಿತ್ಯ ಕೋಟ್ಯಂತರ ಭಾರತೀಯರು ಜಾತಿ, ಧರ್ಮ, ಮತದ ಭೇದವಿಲ್ಲದೆ ರಾಮನ ದರ್ಶನ ಪಡೆಯುತ್ತಿದ್ದಾರೆ. ಇನ್ನು, ಉತ್ತರ ಪ್ರದೇಶ ರಾಜಧಾನಿ ಲಖನೌನಿಂದ ಸುಮಾರು 350 ಮುಸ್ಲಿಮರು ಅಯೋಧ್ಯೆಗೆ ಪಾದಯಾತ್ರೆ ಮೂಲಕ ತೆರಳಿ, ರಾಮನ ದರ್ಶನ ಪಡೆಯುವ ಮೂಲಕ ಸೌಹಾರ್ದತೆಯ ಸಂದೇಶ ರವಾನಿಸಿದ್ದಾರೆ. ನೂರಾರು ಮುಸ್ಲಿಮರು ರಾಮನ ದರ್ಶನ ಪಡೆದ ವಿಡಿಯೊ (Viral Video) ಈಗ ವೈರಲ್‌ ಅಗಿದೆ.

ಹೌದು, ಭಗವಾನ್‌ ರಾಮನ ಮೇಲಿನ ಭಕ್ತಿಯಿಂದಾಗಿ ಮಹಿಳೆಯರು ಸೇರಿ 350 ಮುಸ್ಲಿಮರು ನಿತ್ಯ 25 ಕಿಲೋಮೀಟರ್‌ನಂತೆ ಪಾದಯಾತ್ರೆ ಮಾಡಿ, ಆರು ದಿನಗಳಲ್ಲಿ ಒಟ್ಟು 150 ಕಿಲೋಮೀಟರ್‌ ಪಾದಯಾತ್ರೆ ಮೂಲಕ ಅಯೋಧ್ಯೆ ತಲುಪಿದ್ದಾರೆ. “ಭಗವಾನ್‌ ಶ್ರೀರಾಮನು ಎಲ್ಲ ಭಾರತೀಯರ ಪೂರ್ವಜನಾಗಿದ್ದಾನೆ. ಆತನ ದರ್ಶನ ಪಡೆಯಲು ನಾವು ಬರಿಗಾಲಿನಲ್ಲೇ ಪಾದಯಾತ್ರೆ ಮಾಡಿದೆವು. ಈಗ ದರ್ಶನ ಪಡೆದ ಬಳಿಕ ಖುಷಿಯಾಯಿತು. ರಾಮನನ್ನು ಆರಾಧಿಸುತ್ತ, ಎಲ್ಲರೂ ಅನ್ಯೋನ್ಯವಾಗಿರೋಣ” ಎಂದು ಪಾದಯಾತ್ರೆ ತಂಡದ ಹಿರಿಯ ಸದಸ್ಯ ಶಹೀದ್‌ ಸಯೀದ್‌ ತಿಳಿಸಿದ್ದಾರೆ.

ರಾಮಮಂದಿರ ಉದ್ಘಾಟನೆಯಾದ 11 ದಿನಗಳಲ್ಲಿಯೇ ಸುಮಾರು 25 ಲಕ್ಷ ಜನ ಭೇಟಿ ನೀಡಿದ್ದು, ಇದುವರೆಗೆ 25 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ ಎಂದು ರಾಮಮಂದಿರ ಟ್ರಸ್ಟ್‌ ತಿಳಿಸಿದೆ. “ರಾಮಮಂದಿರ ಆವರಣದಲ್ಲಿ ಸುಮಾರು 10 ಕಾಣಿಕೆ ಪೆಟ್ಟಿಗೆಗಳನ್ನು ಇರಿಸಲಾಗಿದೆ. ಕಾಣಿಕೆ ಹುಂಡಿಗಳ ಮೂಲಕವೇ 8 ಕೋಟಿ ರೂ. ಸಂಗ್ರಹವಾಗಿದೆ. ಆನ್‌ಲೈನ್‌ ಮೂಲಕ 3.5 ಕೋಟಿ ರೂ. ಸಂಗ್ರಹವಾಗಿದೆ. ರಾಮಮಂದಿರ ಲೋಕಾರ್ಪಣೆಯಾದ ಬಳಿಕ ಪ್ರತಿ ದಿನ ಸರಾಸರಿ 2 ಲಕ್ಷ ಭಕ್ತರು ರಾಮಲಲ್ಲಾನ ದರ್ಶನ ಮಾಡುತ್ತಿದ್ದಾರೆ. ಕಾಣಿಕೆಯ ಹಣವನ್ನು ಲೆಕ್ಕ ಹಾಕಲು 11 ಬ್ಯಾಂಕ್‌ ಉದ್ಯೋಗಿಗಳು ಸೇರಿ 14 ಮಂದಿಯನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕಣ್ಗಾವಲಿನಲ್ಲಿಯೇ ಎಲ್ಲ ಪ್ರಕ್ರಿಯೆ ನಡೆಯಲಿದೆ” ಎಂದು ರಾಮಮಂದಿರ ಟ್ರಸ್ಟ್‌ ಮಾಹಿತಿ ನೀಡಿದೆ.

ಇದನ್ನೂ ಓದಿ: Raja Marga Column: ಅಡ್ವಾಣಿ ರಥಯಾತ್ರೆ; ರಾಮಜನ್ಮಭೂಮಿ ಹೋರಾಟದ ಮಹತ್ತರ ಮೈಲುಗಲ್ಲು

ಫೆ.15ರಿಂದ ಎರಡನೇ ಹಂತದ ಕಾಮಗಾರಿ ಆರಂಭ

“ರಾಮಮಂದಿರದ ಮೊದಲನೇ ಮಹಡಿಯ ನಿರ್ಮಾಣ ಭಾಗಶಃ ಮುಕ್ತಾಯಗೊಂಡಿದೆ. ಎರಡನೇ ಮಹಡಿ ಹಾಗೂ ಗೋಪುರ ನಿರ್ಮಾಣದ ಕಾಮಗಾರಿ ಬಾಕಿ ಇದೆ. ಫೆಬ್ರವರಿ 15ರಿಂದ ಕಾಮಗಾರಿ ಆರಂಭವಾಗಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ” ಎಂದು ರಾಮಮಂದಿರ ಟ್ರಸ್ಟ್‌ನ ಅನಿಲ್‌ ಮಿಶ್ರಾ ಮಾಹಿತಿ ನೀಡಿದ್ದಾರೆ. ರಾಮಮಂದಿರ ಆವರಣದಲ್ಲಿ ಎರಡನೇ ಹಂತದ ಕಾಮಗಾರಿಗಾಗಿ ಎರಡು ಟವರ್‌ ಕ್ರೇನ್‌ಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಫೆಬ್ರವರಿ 15ರಿಂದ ಸುಮಾರು 3,500 ಕಾರ್ಮಿಕರು, ಸಿಬ್ಬಂದಿಯು ನಿರ್ಮಾಣ ಕಾರ್ಯ ಆರಂಭಿಸಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version