ಶಿಮ್ಲಾ: ಹಿಮಾಚಲ ಪ್ರದೇಶ, ಉತ್ತರಾಖಂಡ್, ಜಾರ್ಖಂಡ್, ಒಡಿಶಾದಲ್ಲಿ ಭೀಕರ ಪ್ರವಾಹ, (Flash Flood) ಮಳೆಯ ಆರ್ಭಟಕ್ಕೆ ಜನ ತತ್ತರಿಸಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಪ್ರವಾಹಕ್ಕೆ ಒಟ್ಟು ೩7 ಮಂದಿ ಸಾವಿಗೀಡಾಗಿದ್ದಾರೆ. ಹಿಮಾಚಲ ಪ್ರದೇಶ ಒಂದರಲ್ಲಿಯೇ ನೆರೆಗೆ ಬಲಿಯಾದವರ ಸಂಖ್ಯೆ ಕನಿಷ್ಠ 22ಕ್ಕೆ ಏರಿಕೆಯಾಗಿದೆ. ಭಾರಿ ಮಳೆಯ ಪರಿಣಾಮ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಒಡಿಶಾದಲ್ಲಿ ೪ ಲಕ್ಷ ಜನರು ನೆರೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಕೂಡ ಪ್ರವಾಹ ಪರಿಸ್ಥಿತಿ ಸಂಭವಿಸಿದೆ.
ಹಿಮಾಚಲಪ್ರದೇಶದಲ್ಲಿ ಭಾರಿ ಅನಾಹುತ: ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಹಿಮಾಚಲಪ್ರದೇಶ ತತ್ತರಿಸಿದೆ. ೨೨ ಮಂದಿ ಸಾವಿಗೀಡಾಗಿದ್ದಾರೆ. ೧೨ ಮಂದಿ ಕಣ್ಮರೆಯಾಗಿದ್ದಾರೆ. ರಾಜ್ಯದ ಕಾಂಗ್ರಾದಲ್ಲಿರುವ ಚಕ್ಕಿ ಸೇತುವೆ ಕುಸಿದಿದೆ. ಇದರಿಂದ ಪಠಾಣ್‌ಕೋಟ್ ಮತ್ತು ಜೋಗಿಂದರ್‌ನಗರ್ ನಡುವೆ ಸಂಪರ್ಕ ಕಡಿತವಾಗಿದೆ. ಮೃತಪಟ್ಟವರಿಗೆ ಸಿಎಂ ಜೈರಾಮ್ ಠಾಕೂರ್ ಸಂತಾಪ ಸಲ್ಲಿಸಿದ್ದು, ರಾಜ್ಯ ಸರ್ಕಾರ ಪರಿಹಾರ ಕಾರ್ಯಾಚರಣೆ ಕೈಗೊಂಡಿದೆ. ಆಗಸ್ಟ್ ೨೫ರ ತನಕ ರಾಜ್ಯದಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದೆ. ಕಾಂಗ್ರಾ, ಚಂಬಾ, ಮಂಡಿ, ಕುಲು, ಶಿಮ್ಲಾ, ಸಿರಾಮುರ್, ಸೋಲನ್, ಹಮಿಪುರ, ಉನಾ, ಬಿಲಸಾಪುರ್ ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹ ನಿರೀಕ್ಷಿಸಲಾಗಿದೆ. ಭೂಕುಸಿತದ ಕಟ್ಟೆಚ್ಚರ ಘೋಷಿಸಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹಮಿಪುರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸಂಬಂಧಿತ ಅವಘಡಗಳು ಸಂಭವಿಸಿವೆ. ಪ್ರವಾಹಕ್ಕೆ ಕೊಚ್ಚಿಹೋಗಿ, ಭೂಕುಸಿತ ಉಂಟಾಗಿ ಜನ ಮೃತಪಟ್ಟಿದ್ದಾರೆ. ಆದಾಗ್ಯೂ, ಪ್ರವಾಹಪೀಡಿತ ಜಿಲ್ಲೆಯಿಂದ ೨೨ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಉತ್ತರಾಖಂಡ್: ಹಿಮಾಚಲಪ್ರದೇಶದ ನೆರೆ ರಾಜ್ಯ ಉತ್ತರಾಖಂಡ್‌ನಲ್ಲೂ ಮೇಘ ಸ್ಫೋಟಕ್ಕೆ ೪ ಮಂದಿ ಬಲಿಯಾಗಿದ್ದಾರೆ. ೧೦ ಜನ ಕಣ್ಮರೆಯಾಗಿದ್ದಾರೆ. ನದಿಗಳು ಉಕ್ಕಿ ಹರಿಯುತ್ತಿವೆ. ಜನಪ್ರಿಯ ಪ್ರವಾಸಿ ತಾಣ ಮಸ್ಸೂರಿಗೆ ಬಳಿ ಸಾಂಗ್ ನದಿಗೆ ನಿರ್ಮಿಸಿದ್ದ ಸೇತುವೆ ಕುಸಿದು ಬಿದ್ದಿದೆ.
ಒಡಿಶಾ: ಒಡಿಶಾದಲ್ಲಿ ಭಾರಿ ಮಳೆಯ ಪರಿಣಾಮ ಮಹಾನದಿಯಲ್ಲಿ ಪ್ರವಾಹ ಸಂಭವಿಸಿದೆ. ೫೦೦ ಗ್ರಾಮಗಳಲ್ಲಿ ೪ ಲಕ್ಷಕ್ಕೂ ಅಧಿಕ ಜನ ಸಂತ್ರಸ್ತರಾಗಿದ್ದಾರೆ. ನಾನಾ ನದಿಗಳಲ್ಲಿ ನೀರಿನ ಮಟ್ಟ ಏರುಗತಿಯಲ್ಲಿದೆ. ನಾಲ್ವರು ಪ್ರವಾಹಕ್ಕೆ ಬಲಿಯಾಗಿದ್ದಾರೆ. ಜಾರ್ಖಂಡ್‌ನಲ್ಲೂ ಭಾರಿ ಮಳೆಯಾಗುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಇಬ್ಬರು ಅಸುನೀಗಿದ್ದಾರೆ.
ಇದನ್ನೂ ಓದಿ: Flash Flood | ಹಿಮಾಚಲ ಪ್ರದೇಶದಲ್ಲಿ ಪ್ರವಾಹಕ್ಕೆ 16 ಜನ ಸಾವು, ಉತ್ತರಾಖಂಡದಲ್ಲಿ ಮೇಘಸ್ಫೋಟ