ಮುಂಬಯಿ: ಮಹಾರಾಷ್ಟ್ರದಲ್ಲಿ ಶಿವಸೇನಾದಿಂದ ಬಂಡಾಯವೆದ್ದಿರುವ ೩೭ ಶಾಸಕರು ಏಕನಾಥ್ ಶಿಂಧೆ ನಮ್ಮ ನಾಯಕ ಎಂದು ವಿಧಾನಸಭೆಯ ಡೆಪ್ಯುಟಿ ಸ್ಪೀಕರ್‌ಗೆ ಗುರುವಾರ ಪತ್ರ ಬರೆದಿದ್ದಾರೆ. ಈ ನಡುವೆ ತಮಗೆ ೪೨ ಶಾಸಕರ ಬೆಂಬಲ ಇದೆ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ. ಶುಕ್ರವಾರ ಮತ್ತಷ್ಟು ಶಾಸಕರು ಶಿಂಧೆ ಬಣಕ್ಕೆ ಸೇರ್ಪಡೆಯಾಗುವ ನಿರೀಕ್ಷೆ ಇದೆ.
” ರಾಷ್ಟ್ರೀಯ ಪಕ್ಷವೊಂದು ನಮಗೆ ಅಗತ್ಯ ನೆರವು ನೀಡುತ್ತಿದೆ. ಅದು ಕೇಂದ್ರದಲ್ಲಿ ಅತಿ ದೊಡ್ಡ ಶಕ್ತಿಯಾಗಿದೆʼ ಎನ್ನುವ ಮೂಲಕ ಬಿಜೆಪಿಯ ಬೆಂಬಲವೂ ಇದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
೩೭ ಶಾಸಕರು ಶಿವಸೇನಾದಿಂದ ಹೊರನಡೆದಿರುವ ಕಾರಣ ಪಕ್ಷದ ಎರಡನೇ ಒಂದರಷ್ಟು ಶಾಸಕರು ಹೊರ ಬಂದಂತಾಗಿದೆ. ಹೀಗಾಗಿ ಪಕ್ಷಾಂತರ ನಿಷೇಧದ ಅನರ್ಹತೆ ಕಾಯಿದೆ ಅನ್ವಯವಾಗುವುದಿಲ್ಲ.
ಈ ನಡುವೆ ಮಹಾರಾಷ್ಟ್ರದ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್‌ವಾಲ್ ಅವರು ಏಕನಾಥ್ ಶಿಂಧೆ ಬಣದ ಬಂಡಾಯ ವಿಚಾರದಲ್ಲಿ ಶಿವಸೇನಾಗೆ ಬಂಬಲ ಸೂಚಿಸಿದ್ದಾರೆ. ಶಿವಸೇನಾ ಶಾಸಕಾಂಗ ಪಕ್ಷದ ನಾಯಕರಾಗಿ ಅಜಯ್ ಚೌಧುರಿ ಅವರ ನೇಮಕಾತಿ ಪತ್ರವನ್ನು ಸ್ವೀಕರಿಸಿರುವುದಾಗಿ ಹಾಗೂ ಶಿಂಧೆ ಬಣದ ಪತ್ರವನ್ನು ಪರಿಶೀಲಿಸಿ ನಿರ್ಧರಿಸುವುದಾಗಿ ತಿಳಿಸಿದ್ದಾರೆ.
ಶಿವಸೇನಾ ಶಾಸಕಾಂಗ ಪಕ್ಷದ ನಾಯಕರಾಗಿ ಏಕನಾಥ್ ಶಿಂಧೆ ಅವರನ್ನು ಬದಲಿಸಿ ಅಜಯ್ ಚೌಧುರಿ ಅವರನ್ನು ನೇಮಿಸಿದೆ.
ಶಿವಸೇನಾದ ೧೯ ಸಂಸದರಿಂದ ಶಿಂಧೆಗೆ ಬೆಂಬಲ?
ಶಿವಸೇನಾದ ೪೨ ಶಾಸಕರು ಮಾತ್ರವಲ್ಲದೆ ೧೯ ಸಂಸದರು ಕೂಡ ಏಕನಾಥ್ ಶಿಂಧೆ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಮತ್ತು ಶಿಂಧೆ ನಡುವೆ ಮೈತ್ರಿ ಇರುವುದರಿಂದ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಸುರಕ್ಷಿತ ಎಂಬ ಭಾವನೆಯನ್ನು ಸಂಸದರು ಹೊಂದಿದ್ದಾರೆ ಎಂದು ಸೇನಾ ನಾಯಕರೊಬ್ಬರು ತಿಳಿಸಿದ್ದಾರೆ.
ಈ ನಡುವೆ ಮಹಾರಾಷ್ಟ್ರ ವಿಕಾಸ ಅಘಾಡಿ ಸದನದಲ್ಲಿ ವಿಶ್ವಾಸ ಮತ ಗೆಲ್ಲಲಿದೆ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ಕಾಂಗ್ರೆಸ್ ತಿಳಿಸಿದೆ. ಶಿವಸೇನಾ ಏಕನಾಥ್ ಶಿಂಧೆ ಮಾತ್ರವಲ್ಲದೆ ಪ್ರಕಾಶ್ ಸುರ್ವೆ, ತಾನಾಜಿ ಸಾವಂತ್, ಅಬ್ದುಲ್ ಸತ್ತಾರ್, ಸಂದೀಪ್ ಭೂಮರೆ, ಭರತ್ ಗೊಗ್ವಾಲೆ, ಸಂಜಯ್ ಶಿರ್‌ಸತ್, ಬಲಾಜಿ ದೇವದಾಸ್, ಲತಾ ಚೌಧುರಿ ಅವರನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದೆ.