4.50 ಲಕ್ಷ ರೂಪಾಯಿ ಕೊಟ್ಟು, 7 ವರ್ಷದ ಹುಡುಗಿಯನ್ನು ಖರೀದಿಸಿ ಮದುವೆಯಾದ 38ವರ್ಷದ ವ್ಯಕ್ತಿ ಮತ್ತು ಬಾಲಕಿಯನ್ನು ಮಾರಾಟ ಮಾಡಿದ ಅವಳ ಅಪ್ಪ-ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ. ಈ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದ್ದು ರಾಜಸ್ಥಾನದ (Rajasthan News) ದೋಲ್ಪುರ ಜಿಲ್ಲೆಯಿಂದ. ಇಲ್ಲಿನ ಮಾನಿಯಾ ಏರಿಯಾ ನಿವಾಸಿಯಾದ ಭೂಪಾಲ್ ಸಿಂಗ್ ಎಂಬಾತ ಹುಡುಗಿಯನ್ನು ಆಕೆಯ ಪಾಲಕರಿಂದ ಖರೀದಿಸಿ, ಮೇ 21ರಂದು ವಿವಾಹವಾಗಿದ್ದಾನೆ. ಸದ್ಯ ಈ ಮದುವೆಯನ್ನು ಅಮಾನ್ಯ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಧೋಲ್ಪುರದ ಎಸ್ಪಿ ಮನೋಜ್ ಕುಮಾರ್ ಅವರಿಗೆ ಯಾರೋ ಸ್ಥಳೀಯರೇ ಈ ಬಗ್ಗೆ ಮಾಹಿತಿ ಕೊಟ್ಟಿದ್ದರು. ಹುಡುಗಿಯನ್ನು ಮಾರಾಟ ಮಾಡಿರುವ ಬಗ್ಗೆ ನಿಖರವಾಗಿ ತಿಳಿಸಿದ್ದರು. ಅದರ ಅನ್ವಯ ಮನಿಯಾ ಡೆಪ್ಯೂಟಿ ಎಸ್ಪಿ ದೀಪಕ್ ಖಂಡೇವಾಲಾ ನೇತೃತ್ವದ ತಂಡ ಭೂಪೇಶ್ ಸಿಂಗ್ ಮನೆ ಮೇಲೆ ರೇಡ್ ಮಾಡಿತ್ತು. ಆ ಮನೆಯಲ್ಲಿ ಹುಡುಗಿ ಸಿಕ್ಕಿದ್ದಾಳೆ. ಅಷ್ಟೇ ಅಲ್ಲ, ಮದುವೆಗಾಗಿ ಆಕೆಯ ಕೈ ಮತ್ತು ಕಾಲುಗಳಿಗೆ ಹಾಕಲಾದ ಮದರಂಗಿ ಗುರುತು ಹಾಗೇ ಇತ್ತು. ಮೊದಮೊದಲು ಭೂಪೇಶ್ ಸಿಂಗ್ ತಾನು ಮದುವೆಯಾಗಿಲ್ಲ ಎಂದು ವಾದಿಸಿದರೂ, ಆಕೆಯ ಕೈ-ಕಾಲಿನ ಮೇಲಿನ ಮದರಂಗಿಯೇ ಸಾಕ್ಷಿ ನುಡಿದಿತ್ತು. ಬಳಿಕ ಭೂಪೇಶ್ ಸಿಂಗ್ ಸತ್ಯ ಒಪ್ಪಿಕೊಂಡಿದ್ದಾನೆ. ಆಕೆಯ ತಂದೆಗೆ 4.50 ಲಕ್ಷ ಕೊಟ್ಟು ಹುಡುಗಿಯನ್ನು ಖರೀದಿ ಮಾಡಿದ್ದೇನೆ ಎಂದು ತಿಳಿಸಿದ್ದಾನೆ.
ಇದನ್ನೂ ಓದಿ: ಚೀತಾಗಳನ್ನು ರಾಜಸ್ಥಾನದಲ್ಲಿ ಬಿಡಿ, ಪ್ರತಿಪಕ್ಷದ ಆಡಳಿತ ಇದೆ ಎಂದು ನಿರಾಕರಿಸಬೇಡಿ; ಸುಪ್ರೀಂಕೋರ್ಟ್ ಸೂಚನೆ
ಭೂಪೇಶ್ ಸಿಂಗ್ ಕುಟುಂಬ ಮೊದಲು ಇಲ್ಲಿರಲಿಲ್ಲ. ಕೆಲ ಕಾಲಗಳ ಹಿಂದೆ ಮಧ್ಯಪ್ರದೇಶದಲ್ಲಿ ಒಂದು ಹತ್ಯೆಕೇಸ್ನಲ್ಲಿ ಈತನ ಕುಟುಂಬದ ಕೆಲ ಸದಸ್ಯರು ಜೈಲಿಗೆ ಹೋಗಿದ್ದರು. ಅದಾದ ಮೇಲೆ ಭೂಪೇಶ್ ಸಿಂಗ್ ಮತ್ತು ಇತರರು ರಾಜಸ್ಥಾನದ ಮಾನಿಯಾಕ್ಕೆ ಬಂದು ನೆಲೆಸಿದ್ದರು ಎಂದು ಹೇಳಲಾಗಿದೆ. ಹಾಗೇ, ಹುಡುಗಿಯ ತಂದೆಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.