Site icon Vistara News

ಕೇರಳದ ಕೊಚ್ಚಿ ವಿವಿ ಕಾಲೇಜು ಫೆಸ್ಟ್ ವೇಳೆ ಕಾಲ್ತುಳಿತ, 4 ವಿದ್ಯಾರ್ಥಿಗಳ ಸಾವು, 40 ಮಂದಿಗೆ ಗಾಯ

Kerala Stampede

4 College Students Dead In Stampede During Music Concert In Kerala

ತಿರುವನಂತಪುರ: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ವಿಶ್ವವಿದ್ಯಾಲಯದಲ್ಲಿ ನಡೆದ ಕಾಲೇಜು ಫೆಸ್ಟಿವಲ್‌ ವೇಳೆ ಭಾರಿ ಕಾಲ್ತುಳಿತ ಉಂಟಾಗಿದ್ದು, ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಎರ್ನಾಕುಲಂ ಜಿಲ್ಲೆಯಲ್ಲಿರುವ ಕೊಚ್ಚಿ ಯುನಿವರ್ಸಿಟಿ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯಲ್ಲಿ (Cochin University of Science and Technology- CUSAT) ನಡೆದ ಸಂಗೀತ ಕಛೇರಿ (Music Concert) ವೇಳೆ ಕಾಲ್ತುಳಿತ ಉಂಟಾಗಿದೆ. ಇದರಿಂದಾಗಿ ನಾಲ್ವರು ವಿದ್ಯಾರ್ಥಿಗಳು ಮೃತಪಡುವ ಜತೆಗೆ 40ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಖ್ಯಾತ ಗಾಯಕಿ ನಿಖಿತಾ ಗಾಂಧಿ ಅವರು ಸಂಗೀತ ಕಛೇರಿ ನಡೆಸುತ್ತಿದ್ದರು. ಅವರ ಗಾಯನಕ್ಕೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹುಚ್ಚೆದ್ದು ಕುಣಿಯುತ್ತಿದ್ದರು. ಇದೇ ವೇಳೆ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿದ ತೀವ್ರತೆಗೆ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ನಾಲ್ವರು ವಿದ್ಯಾರ್ಥಿಗಳು ಇಬ್ಬರು ಯುವತಿಯರಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

2 ಸಾವಿರ ವಿದ್ಯಾರ್ಥಿಗಳು ಭಾಗಿ

ಕೊಚ್ಚಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ನೂರಾರು ಕಾಲೇಜುಗಳು ಬರುತ್ತವೆ. ವಿಶ್ವವಿದ್ಯಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಿಖಿತಾ ಗಾಂಧಿ ಅವರನ್ನು ಕರೆಸಿ ಸಂಗೀತೋತ್ಸವ ಆಯೋಜಿಸಲಾಗಿತ್ತು. ಹಲವು ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಹಾಲ್‌ನಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಇದೇ ವೇಳೆ ನೂಕುನುಗ್ಗಲು ಉಂಟಾಗಿದೆ. ಅಲ್ಲದೆ, ಭಾರಿ ಪ್ರಮಾಣದಲ್ಲಿ ಕಾಲ್ತುಳಿತ ಕೂಡ ಸಂಭವಿಸಿದೆ. ಹಾಗಾಗಿ, ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಳಮಶ್ಶೇರಿಯಲ್ಲಿರುವ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಇದರಿಂದಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಗಾಯಗೊಂಡವರಲ್ಲೇ ಕೆಲವರ ಸ್ಥಿತಿ ಗಂಭೀರವಾಗಿದೆ. ಓಪನ್‌ ಏರ್‌ ಆಡಿಟೋರಿಯಂನಲ್ಲಿ ಸಂಗೀತ ಕಛೇರಿ ಆಯೋಜಿಸಿದರೂ ಇಷ್ಟೊಂದು ಪ್ರಮಾಣದಲ್ಲಿ ಕಾಲ್ತುಳಿತ ಸಂಭವಿಸಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೆಯೇ, ಗಾಯಾಳುಗಳ ಚಿಕಿತ್ಸೆಗೆ ಸರಿಯಾದ ಕ್ರಮ ತೆಗೆದುಕೊಳ್ಳಿ ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version