Site icon Vistara News

ಲೋಕಸಭೆಯ ನಾಲ್ವರು ಸಂಸದರ ಅಮಾನತು ರದ್ದು; ಸ್ಪೀಕರ್‌ ಓಂ ಬಿರ್ಲಾರಿಂದ ಎಚ್ಚರಿಕೆ

Loksabha

ನವ ದೆಹಲಿ: ಬೆಲೆ ಏರಿಕೆ, ಹಣದುಬ್ಬರ, ಜಿಎಸ್‌ಟಿ ದರ ಹೆಚ್ಚಳ ವಿರೋಧಿಸಿ ಲೋಕಸಭೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿ, ಘೋಷಣಾ ಫಲಕ ಪ್ರದರ್ಶನ ಮಾಡಿ ಅಮಾನತುಗೊಂಡಿದ್ದ ಕಾಂಗ್ರೆಸ್‌ನ ನಾಲ್ವರು ಸಂಸದರು ಮತ್ತೆ ಮುಂಗಾರು ಅಧಿವೇಶನ ಕಲಾಪಕ್ಕೆ ಮರಳಿದ್ದಾರೆ. ಅವರ ಅಮಾನತನ್ನು ಲೋಕಸಭೆ ಸ್ಪೀಕರ್‌ ಓಂಬಿರ್ಲಾ ರದ್ದುಗೊಳಿಸಿದ್ದಾರೆ. ಹಾಗೇ, ಇನ್ನೊಮ್ಮೆ ಸದನದಲ್ಲಿ ಫಲಕ ಪ್ರದರ್ಶಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಸಂಸದರ ಅಮಾನತು ರದ್ದುಗೊಳಿಸುವ ನಿರ್ಣಯವನ್ನು ಇಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಸದನದಲ್ಲಿ ಮಂಡಿಸಿದರು. ಅದನ್ನು ಓಂ ಬಿರ್ಲಾ ಅನುಮೋದಿಸಿದರು. ಅವತ್ತು ಜುಲೈ 25ರಂದು ಈ ನಾಲ್ವರನ್ನು ಅಮಾನತು ಮಾಡುವಾಗ ಅವರಿಗೆ ಇನ್ನು ಮುಂಗಾರು ಅಧಿವೇಶನ ಮುಗಿಯುವವರಿಗೂ ಸದನಕ್ಕೆ ಪ್ರವೇಶವಿಲ್ಲ ಎಂದು ಹೇಳಲಾಗಿತ್ತು. ಆದರೆ ಒಂದು ವಾರದ ನಂತರ ಅವರೆಲ್ಲ ಅಮಾನತು ರದ್ದುಗೊಳಿಸಲಾಗಿದೆ. ಇಂದು ಇವರೆಲ್ಲರ ಅಮಾನತು ರದ್ದಾಗುತ್ತಿದ್ದಂತೆ, ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ ಮತ್ತೆ ಬೆಲೆ ಏರಿಕೆ ಬಗ್ಗೆ ಚರ್ಚೆ ಪ್ರಾರಂಭಿಸಿದರು.

ಘೋಷಣಾ ಫಲಕ ತರಬೇಡಿ
ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಪ್ರಾರಂಭವಾಗುವುದಕ್ಕೂ ಮೊದಲೇ ಹೀಗೊಂದು ಸೂಚನೆ ಹೊರಡಿಸಲಾಗಿತ್ತು. ಸಂಸತ್ತಿನ ಒಳಗೆ, ಸಂಕೀರ್ಣದಲ್ಲಿ ಯಾವುದೇ ಘೋಷಣಾ ಫಲಕ ಪ್ರದರ್ಶನ ಮಾಡಬಾರದು ಎಂದು ಲೋಕಸಭೆ ಕಾರ್ಯಾಲಯ ಪ್ರಕಟಣೆ ಹೊರಡಿಸಿತ್ತು. ಹಾಗಿದ್ದಾಗ್ಯೂ ಈ ನಾಲ್ವರು ನಿಯಮ ಉಲ್ಲಂಘಿಸಿ, ಫಲಕ ಹಿಡಿದು ಪ್ರತಿಭಟನೆ ಮಾಡಿದ್ದರು. ಅಶಿಸ್ತಿನ ವರ್ತನೆಯೆಂದು ಪರಿಗಣಿಸಿ ಇವರನ್ನೆಲ್ಲ ಅಮಾನತು ಮಾಡಲಾಗಿತ್ತು. ಇಂದು ಅದನ್ನು ರದ್ದುಗೊಳಿಸಿದ ಬಳಿಕ ಮಾತನಾಡಿದ ಓಂ ಬಿರ್ಲಾ, ʼಸದನದೊಳಗೆ ದಯವಿಟ್ಟು ಫಲಕಗಳನ್ನು ಪ್ರದರ್ಶನ ಮಾಡಬೇಡಿ ಎಂದು ಎಲ್ಲ ಪಕ್ಷದವರಲ್ಲೂ ಮನವಿ ಮಾಡುತ್ತೇನೆ. ಹಾಗೊಮ್ಮೆ ಯಾರಾದರೂ ಸಂಸದರು ತಂದಿದ್ದೇ ಆದರೆ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ. ಆಮೇಲೆ ಸರ್ಕಾರದ ಮಾತನ್ನೂ ಕೇಳುವುದಿಲ್ಲ, ಪ್ರತಿಪಕ್ಷಗಳ ಮಾತನ್ನೂ ಕೇಳುವುದಿಲ್ಲʼ ಎಂದು ಹೇಳಿದ್ದಾರೆ.

ಜುಲೈ 18ರಿಂದ ಮುಂಗಾರು ಅಧಿವೇಶನ ಶುರುವಾಗಿದೆ. ಆದರೆ ಆಗಿನಿಂದಲೂ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯೇ ಹೆಚ್ಚಾಗಿದೆ. ಬೆಲೆ ಏರಿಕೆ, ಜಿಎಸ್‌ಟಿ ಹೆಚ್ಚಳವನ್ನೇ ಮುಖ್ಯವಾಗಿಟ್ಟುಕೊಂಡು ವಿಪಕ್ಷಗಳ ಸದಸ್ಯರು ಗಲಾಟೆ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಇದುವರೆಗೆ ಒಂದಿನವೂ ಯಾವುದೇ ವಿಷಯದ ಬಗ್ಗೆ ಸರಿಯಾಗಿ ಚರ್ಚೆಯಾಗಿಲ್ಲ. ಇನ್ನೊಂದೆಡೆ ರಾಜ್ಯಸಭೆಯಲ್ಲೂ 23 ಸಂಸದರು ಅಮಾನತುಗೊಂಡಿದ್ದಾರೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಫಲಕ ಪ್ರದರ್ಶನ, ನಾಲ್ವರು ಕೈ ಸಂಸದರು ಸಸ್ಪೆಂಡ್‌, ಹಾಲಿ ಅಧಿವೇಶನವಿಡೀ ಪ್ರವೇಶವಿಲ್ಲ

Exit mobile version