Site icon Vistara News

Uttarakhand Violence: ಅಕ್ರಮ ಮದರಸಾ ನೆಲಸಮ ಬಳಿಕ ಹಿಂಸಾಚಾರಕ್ಕೆ 4 ಬಲಿ; ಪರಿಸ್ಥಿತಿ ಉದ್ವಿಗ್ನ

Uttarakhand Violence

4 Dead, 250 Injured In Uttarakhand Violence, Curfew Imposed, Schools Shut

ಡೆಹ್ರಾಡೂನ್:‌ ಉತ್ತರಾಖಂಡದ ಹಲ್ದ್ವಾನಿಯಲ್ಲಿ (Uttarakhand Violence) ಗುರುವಾರ (ಫೆಬ್ರವರಿ 9) ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಮದರಸಾ ನೆಲಸಮ (Illegal Madrasa) ಮಾಡುವ ವೇಳೆ ಸಂಭವಿಸಿದ ಹಿಂಸಾಚಾರ ಇನ್ನಷ್ಟು ಭುಗಿಲೆದ್ದಿದೆ. ಹಿಂಸಾಚಾರದಿಂದಾಗಿ ನಾಲ್ವರು ಮೃತಪಟ್ಟರೆ, 250ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಇದರಿಂದಾಗಿ, ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಿಂಸಾಚಾರ ಮಿತಿಮೀರಿದ ಕಾರಣ ಬನ್‌ಭೂಲ್‌ಪುರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಹಿಂಸಾಚಾರದ ಕುರಿತು ನೈನಿತಾಲ್‌ ಜಿಲ್ಲಾಧಿಕಾರಿ ವಂದನಾ ಮಾಹಿತಿ ನೀಡಿದ್ದಾರೆ. “ಹಿಂಸಾಚಾರದಿಂದಾಗಿ ನಾಲ್ವರು ಮೃತಪಟ್ಟಿದ್ದು, ಪೊಲೀಸರು ಸೇರಿ 250ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಕರ್ಫ್ಯೂ ಜಾರಿ ಮಾಡುವ ಜತೆಗೆ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ. ಅಲ್ಲದೆ, ನಗರದಲ್ಲಿ ಇಂಟರ್‌ನೆಟ್‌ ಸೇವೆಯನ್ನು ಕೂಡ ಸ್ಥಗಿತಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.

ಮದರಸಾ ನೆಲಸಮ ವೇಳೆ ಆಗಿದ್ದೇನು?

ಕಾನೂನುಬಾಹಿರವಾಗಿ ನಿರ್ಮಿಸಲಾದ ಮದರಸವನ್ನು ತೆರವುಗೊಳಿಸಲು ಅಧಿಕಾರಿಗಳು ಪೊಲೀಸರ ಬೆಂಬಲದೊಂದಿಗೆ ಮುಂದಾಗಿದ್ದರು. ಈ ವೇಳೆ, ಉದ್ರಿಕ್ತರ ಗುಂಪು ಅಧಿಕಾರಿಗಳು ಮತ್ತು ಪೊಲೀಸರು ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಗಾಯಗೊಂಡ ಪೊಲೀಸರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಈ ಮಧ್ಯೆ, ಹಿಂಸಾಚಾರ ನಿಯಂತ್ರಣಕ್ಕೆ ಸರ್ಕಾರವು, ಗಲಭೆಕೋರರ ವಿರುದ್ಧ ಕಂಡಲ್ಲಿ ಗುಂಡು (Shoot-At-Sight Order) ಹೊಡೆಯುವ ಆದೇಶವನ್ನು ನೀಡಿದೆ.

ಪೊಲೀಸರಲ್ಲದೆ, ಆಡಳಿತ ಮತ್ತು ನಾಗರಿಕ ಅಧಿಕಾರಿಗಳ ತಂಡವು ಪಕ್ಕದ ಮಸೀದಿಯನ್ನು ಹೊಂದಿರುವ ಮದರಸಾಕ್ಕೆ ಹೋಗಿತ್ತು. ಮೂಲಗಳ ಪ್ರಕಾರ ಜೆಸಿಬಿ ಯಂತ್ರ ಆರಂಭವಾಗುತ್ತಿದ್ದಂತೆ ಉದ್ರಿಕ್ತರ ಗುಂಪು ಅಧಿಕಾರಿಗಳ ಮೇಲೆ ದಾಳಿ ನಡೆಸಿ ದೂರದಿಂದಲೇ ಕಲ್ಲು ತೂರಾಟ ನಡೆಸಿತು. ಈ ವೇಳೆ, ಪೊಲೀಸರು ಅಲ್ಲದೆ ಹಲವಾರು ಆಡಳಿತ ಅಧಿಕಾರಿಗಳು ಹಾಗೂ ಪತ್ರಕರ್ತರು ಗಾಯಗೊಂಡರು. ಪೊಲೀಸರು ಅಶ್ರುವಾಯು ಸಿಡಿಸಿದ್ದರಿಂದ ಹಿಂಸಾಚಾರ ಮತ್ತಷ್ಟು ಭುಗಿಲೆದ್ದಿತು. ಪೊಲೀಸ್ ಠಾಣೆಯ ಹೊರಗೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಯಿತು.

ಇದನ್ನೂ ಓದಿ: Uttarakhand Violence: ಮದರಸ ನೆಲಸಮ ಮಾಡುವಾಗ ಭುಗಿಲೆದ್ದ ಹಿಂಸಾಚಾರ; ಕಂಡಲ್ಲಿ ಗುಂಡು ಹೊಡೆಯಲು ಆದೇಶ!

ಮದರಸಾ ಮತ್ತು ನಮಾಜ್ ನಡೆಸಲಾಗುವ ಸ್ಥಳಗಳು ಸಂಪೂರ್ಣವಾಗಿ ಅಕ್ರಮವಾಗಿದೆ ಎಂದು ಪಾಲಿಕೆ ಆಯುಕ್ತ ಪಂಕಜ್ ಉಪಾಧ್ಯಾಯ ಹೇಳಿದ್ದಾರೆ. ಈ ಹಿಂದೆ ನಗರಸಭೆಯು ಸಮೀಪದ ಮೂರು ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಅಕ್ರಮ ಮದರಸಾ ಮತ್ತು ನಮಾಜ್ ಸ್ಥಳವನ್ನು ಸೀಲ್ ಮಾಡಿತ್ತು. ಈ ಕಟ್ಟಡಗಳನ್ನು ಇಂದು ನೆಲಸಮ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ. ಸಮಾಜಘಾತುಕ ಶಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version