Site icon Vistara News

ಪಂಜಾಬ್​​ನ ಸೇನಾ ನೆಲೆಯಲ್ಲಿ ಹತ್ಯೆಗೀಡಾದ ನಾಲ್ವರು ಉಗ್ರರಲ್ಲ, ಸೇನಾ ಯೋಧರು; ಶೂಟ್​ ಮಾಡಿದವನಿಗಾಗಿ ಹುಡುಕಾಟ

Bathinda military station firing

#image_title

ಪಂಜಾಬ್​​ನ ಭಟಿಂಡಾ ಸೇನಾ ನೆಲೆಯಲ್ಲಿ ಇಂದು ಮುಂಜಾನೆ ನಡೆದ ಫೈರಿಂಗ್​​ನಲ್ಲಿ ಮೃತಪಟ್ಟ ನಾಲ್ವರೂ ಸೇನಾ ಯೋಧರೇ (Bathinda Military Station Firing) ಎಂದು ಭಾರತೀಯ ಸೇನೆ ನೈಋತ್ಯ ಕಮಾಂಡ್​​ ಹೇಳಿಕೆ ಬಿಡುಗಡೆ ಮಾಡಿದೆ. ಇಂದು ಬೆಳಗ್ಗೆ ಭಟಿಂಡಾ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರು ಉಗ್ರರು ಎಂದು ಮೊದಲು ವರದಿಯಾಗಿತ್ತು. ಸೇನಾ ನೆಲೆಗೆ ಭಯೋತ್ಪಾದಕರು ನುಗ್ಗಿದ್ದರು. ಹೀಗಾಗಿ ಸೇನಾ ಸಿಬ್ಬಂದಿ ಅವರ ಮೇಲೆ ಫೈರಿಂಗ್​ ನಡೆಸಿದ್ದರು ಎಂದು ಹೇಳಲಾಗಿತ್ತು. ಆದರೆ ಈಗ ಅಪ್ಡೇಟ್ ಮಾಹಿತಿ ಬಂದಿದ್ದು, ಮೃತಪಟ್ಟವರು ಉಗ್ರರಲ್ಲ, ಸೇನಾ ಯೋಧರೇ ಎನ್ನಲಾಗಿದೆ.

ಮೃತಪಟ್ಟ ಸೈನಿಕರು ಫಿರಂಗಿ ದಳಕ್ಕೆ ಸೇರಿದ 80 ಮಧ್ಯಮ ರೆಜಿಮೆಂಟ್​ಗೆ ಸೇರಿದವರಾಗಿದ್ದಾರೆ. ಇಂದು ಮುಂಜಾನೆ 4.35ರ ಹೊತ್ತಿಗೆ ಮಿಲಿಟರಿ ಸ್ಟೇಶನ್​​ನಲ್ಲಿರುವ ಮೆಸ್​​ನಲ್ಲಿ ಈ ಗುಂಡಿನ ದಾಳಿ ನಡೆದಿತ್ತು. ಸಿವಿಲ್​ ಡ್ರೆಸ್​​ನಲ್ಲಿ ಇದ್ದವನೊಬ್ಬ ಫೈರಿಂಗ್ ಮಾಡಿದ್ದಾನೆ. ಸದ್ಯ ಆ ಪ್ರದೇಶವನ್ನು ಸೀಲ್​ ಮಾಡಲಾಗಿದ್ದು, ಪಂಜಾಬ್​ ಪೊಲೀಸ್​ ಹಾಗೂ ಸೇನಾ ಸಿಬ್ಬಂದಿ ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಇದು ಉಗ್ರ ದಾಳಿಯಲ್ಲ ಎಂಬುದಂತೂ ಖಚಿತವಾಗಿದೆ.

ಇದನ್ನೂ ಓದಿ: Firing at military station : ಪಂಜಾಬ್‌ ಸೇನಾ ನೆಲೆ ಪ್ರವೇಶಕ್ಕೆ ಉಗ್ರರ ಯತ್ನ: ನಾಲ್ವರನ್ನು ಹೊಡೆದುರುಳಿಸಿದ ಸೇನೆ

‘ಈಗೆರಡು ದಿನಗಳ ಹಿಂದೆ ಈ ಸೇನಾ ನೆಲೆಯಿಂದ ಐಎನ್​ಎಸ್​ಎಎಸ್​ ರೈಫಲ್​​ ಮತ್ತು 28 ಬುಲೆಟ್​ಗಳು ಸೋಮವಾರ ನಾಪತ್ತೆಯಾಗಿದ್ದವು. ಈ ರೈಫಲ್​​ನಿಂದಲೇ ಗುಂಡಿನ ದಾಳಿ ನಡೆದಿದೆ ಎಂದೂ ಖಚಿತವಾಗಿದೆ. ಈ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದರಿಂದ ಮಾಧ್ಯಮಗಳು ವರದಿ ಪ್ರಕಟಿಸುವಾಗ ಅಷ್ಟೇ ಸೂಕ್ಷ್ಮತೆಯಿಂದ ವರ್ತಿಸಬೇಕು. ಊಹಾಪೋಹದ ವರದಿಗಳನ್ನು ಪ್ರಕಟಿಸಬಾರದು’ ಎಂದೂ ಸೇನೆ ಮನವಿ ಮಾಡಿದೆ. ಎರಡು ದಿನಗಳ ಹಿಂದೆ ಶಸ್ತ್ರಾಸ್ತ್ರ ಕೂಡ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ಇದು ಅಲ್ಲಿನ ಇನ್ನೊಬ್ಬ ಸೇನಾ ಯೋಧನ ಕೃತ್ಯವೇ ಎಂದೂ ಹೇಳಲಾಗಿದೆ. ಆರೋಪಿ ಒಬ್ಬನಿರಬಹುದು ಅಥವಾ ಇಬ್ಬರು ಇರಬಹುದು ಎನ್ನಲಾಗಿದೆ.

Exit mobile version