Site icon Vistara News

ಪತ್ರಕರ್ತೆ ಸೌಮ್ಯಾ ಹತ್ಯೆ; ನಾಲ್ವರಿಗೆ ಜೀವಾವಧಿ ಶಿಕ್ಷೆ, ಕೊಲೆ ಕೇಸ್‌ ಭೇದಿಸಿದ್ದು ಒಂದು ‘ಟ್ಯಾಟೂ’

Sowmya Vishwanathan

4 Killers Of Journalist Soumya Vishwanathan Sentenced To Life‌

ನವದೆಹಲಿ: 2008ರಲ್ಲಿ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಕೊಲೆ ಪ್ರಕರಣದ (Soumya Vishwanathan) ನಾಲ್ವರಿಗೆ ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಮತ್ತೊಬ್ಬ ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಕ್ಟೋಬರ್‌ನಲ್ಲಿಯೇ ಐವರನ್ನು ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿತ್ತು. ಈಗ ಐವರಿಗೂ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ. ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜಿತ್ ಮಲ್ಲಿಕ್ ಮತ್ತು ಅಕ್ಷಯ್ ಕುಮಾರ್ ಅವರನ್ನು ಕೊಲೆ ಮತ್ತು ದರೋಡೆ ದೋಷಿಗಳೆಂದು ಪರಿಗಣಿಸಿರುವ ನ್ಯಾಯಾಲಯವು ಜೀವಾವಧಿ ಶಿಕ್ಷೆ (Life Sentence) ವಿಧಿಸಿದೆ. ಐದನೇ ಆರೋಪಿ ಅಜಯ್‌ ಸೇಥಿಯು ಉಳಿದವರಿಗೆ ಸಹಾಯ ಮಾಡಿದ ಅಪರಾಧ ಮಾಡಿದ್ದಾರೆಂದು ಹೇಳಿದೆ. ಇವನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಹೆಡ್‌ಲೈನ್ಸ್ ಟುಡೆಯ 25 ವರ್ಷದ ಪತ್ರಕರ್ತೆ ಸೌಮ್ಯಾ ಅವರು 2008ರ ಸೆಪ್ಟೆಂಬರ್ 30 ರಂದು ದೆಹಲಿಯ ವಸಂತ ವಿಹಾರ್‌ನಲ್ಲಿ ಕೆಲಸದಿಂದ ಹಿಂತಿರುಗುತ್ತಿದ್ದಾಗ ಹತ್ಯೆಗೀಡಾಗಿದ್ದರು. ಕಾರಿನಲ್ಲಿ ಆಕೆಯ ಶವ ಪತ್ತೆಯಾಗಿತ್ತು ಮತ್ತು ತಲೆಗೆ ತೀವ್ರ ಗಾಯವಾಗಿತ್ತು. ಈ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಈಗ ಕೊಲೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಹಾಗೆಯೇ, ಪೊಲೀಸರು ಪ್ರಕರಣವನ್ನು ಭೇದಿಸಿದ್ದು ರೋಚಕವಾಗಿದೆ.

ದೆಹಲಿಯ ಸಾಕೇತ್‌ ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಘೋಷಿಸಿದ ಬಳಿಕ ಸೌಮ್ಯಾ ವಿಶ್ವನಾಥನ್‌ ಅವರ ತಾಯಿಯು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. “ತೀರ್ಪು ನನಗೆ ಸಮಾಧಾನ ತಂದಿಲ್ಲ. ಆದರೆ, ಶಿಕ್ಷೆ ನೀಡಿರುವುದು ಒಳ್ಳೆಯ ವಿಚಾರವಾಗಿದೆ. ನೀವು ಮಾಡುವ ಅಪರಾಧಗಳಿಗೆ ಸರಿಯಾದ ಬೆಲೆ ತೆರುತ್ತೀರಿ, ಪರಿಣಾಮ ಎದುರಿಸುತ್ತೀರಿ ಎಂಬ ಸಂದೇಶವು ಸಮಾಜಕ್ಕೆ ರವಾನೆಯಾದಂತಾಗಿದೆ” ಎಂದು ಹೇಳಿದ್ದಾರೆ.

ಕೊಲೆ ಕೇಸ್‌ ಭೇದಿಸಲು ಟ್ಯಾಟೂ ಸಹಾಯ

ಒಂದು ಟ್ಯಾಟೂ ಇಡೀ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. “ಐಟಿ ಉದ್ಯೋಗಿ ಜಿಗಿಶಾ ಜೋಶ್‌ ಅವರನ್ನು 2009ರಲ್ಲಿ ಕೊಲೆ ಮಾಡಿದ್ದು, ಇವರ ಕೊಲೆ ಪ್ರಕರಣದ ತನಿಖೆ ನಡೆಸುವಾಗ ನಮಗೆ ಸೌಮ್ಯಾ ವಿಶ್ವನಾಥನ್‌ ಅವರ ಕೊಲೆ ಪ್ರಕರಣವನ್ನೂ ಭೇದಿಸಲು ಸಾಧ್ಯವಾಯಿತು. ಜಿಗಿಶಾ ಅವರ ಶವವು ಫರೀದಾಬಾದ್‌ನ ಸೂರಜ್‌ ಕುಂಡ್‌ ಪ್ರದೇಶದಲ್ಲಿ ಸಿಕ್ಕ ಮೂರು ದಿನಗಳ ಬಳಿಕ ಪ್ರಕರಣವನ್ನು ಭೇದಿಸಲಾಯಿತು. ಸಿಸಿಟಿವಿ ದೃಶ್ಯಾವಳಿಯೊಂದು ನಮಗೆ ಸಿಕ್ಕಿತು. ಅದರಲ್ಲಿ ಒಬ್ಬ ಆರೋಪಿಯು ತನ್ನ ಕೈ ಮೇಲೆ ತನ್ನ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದು, ಮತ್ತೊಬ್ಬನು ಪೊಲೀಸರಿಂದ ಕದ್ದ ವೈರ್‌ಲೆಸ್‌ ಸೆಟ್‌ ಹಿಡಿದುಕೊಂಡಿದ್ದ. ಒಬ್ಬ ಆರೋಪಿಯು ಟ್ಯಾಟೂ ಹಾಕಿಸಿಕೊಂಡು, ಜಿಗಿಶಾ ಡೆಬಿಟ್‌ ಕಾರ್ಡ್‌ ಬಳಸುತ್ತಿದ್ದ ದೃಶ್ಯದ ಆಧಾರದ ಮೇಲೆ ತನಿಖೆ ನಡೆಸಿದಾಗ ಸೌಮ್ಯಾ ವಿಶ್ವನಾಥನ್‌ ಕೊಲೆಯನ್ನೂ ಇವರೇ ಮಾಡಿದ್ದು ಎಂಬುದು ಗೊತ್ತಾಯಿತು” ಎಂದು ತನಿಖಾಧಿಕಾರಿ ಅತುಲ್‌ ಕುಮಾರ್‌ ವರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: Soumya Vishwanathan: ಒಂದು ಟ್ಯಾಟೂ ಪತ್ರಕರ್ತೆ ಕೊಲೆಯ ಕೇಸ್‌ ಭೇದಿಸಿತು; ಸಿನಿಮೀಯ ಕತೆ ಇದು!

“ಬಲ್ಜಿತ್ ಮಲ್ಲಿಕ್ ತನ್ನ ಹೆಸರನ್ನು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ. ಕೂಡಲೇ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸೌಮ್ಯಾ ವಿಶ್ವನಾಥನ್‌ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ. ಇದಾದ ಬಳಿಕ ಮತ್ತೊಂದು ಪೊಲೀಸ್‌ ತಂಡವನ್ನು ತನಿಖೆಗೆ ರಚಿಸಲಾಯಿತು. ಐವರೂ ದೋಷಿಗಳು ಸೌಮ್ಯಾ ವಿಶ್ವನಾಥನ್‌ ಅವರ ಕಾರನ್ನು ಹಿಂಬಾಲಿಸಿ, ಕೊಲೆ ಮಾಡಿದ್ದರು. ಈ ಕುರಿತು ಫೊರೆನ್ಸಿಕ್‌ ಸಾಕ್ಷ್ಯಗಳನ್ನು ಪತ್ತೆಹಚ್ಚುವುದು ನಮಗೆ ನಿಜವಾಗಿಯೂ ಸವಾಲಾಯಿತು. ಆದರೂ ಪ್ರಕರಣವನ್ನು ಭೇದಿಸಿದೆವು” ಎಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version