ನವದೆಹಲಿ: ಉತ್ತರಾಖಂಡದ ತೆಹ್ರಿ ಜಿಲ್ಲೆಯ ಚಂಬಾದಲ್ಲಿ ಸೋಮವಾರ ಸಂಭವಿಸಿದ ಭಾರಿ ಭೂಕುಸಿತದಲ್ಲಿ (Land Slide) ನಾಲ್ಕು ತಿಂಗಳ ಮಗುವೊಂದು ಮಣ್ಣಿನಡಿ ಸಿಲುಕಿ ಮೃತಪಟ್ಟಿದೆ. ಇದರ ಜತೆಗೆ ಇಬ್ಬರು ಮಹಿಳೆಯರೂ ಮೃತಪಟ್ಟಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಭೂಕುಸಿತದ ಅವಶೇಷಗಳ ಅಡಿಯಲ್ಲಿ ಹೂತುಹೋದ ಕಾರಿನಲ್ಲಿ ಅವರ ಶವಗಳು ಪತ್ತೆಯಾಗಿವೆ ಎಂದು ತೆಹ್ರಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಸಿಂಗ್ ಭುಲ್ಲರ್ ತಿಳಿಸಿದ್ದಾರೆ.
ಚಂಬಾ ಪೊಲೀಸ್ ಠಾಣೆಯ ಬಳಿಯ ಟ್ಯಾಕ್ಸಿ ಸ್ಟ್ಯಾಂಡ್ ಮೇಲೆ ಭೂಕುಸಿತ ಸಂಭವಿಸಿತ್ತು. ಇನ್ನೂ ಹಲವಾರು ವಾಹನಗಳ ಮಣ್ಣಿನಡಿ ಸಿಕ್ಕಿಬಿದ್ದಿರಬಹುದು ಎಂದು ಅಂದಾಜಿಸಲಾಗಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಮೃತರನ್ನು ಪೂನಂ ಖಂಡೂರಿ, ಅವರ ನಾಲ್ಕು ತಿಂಗಳ ಮಗ ಮತ್ತು ಅವರ ಅತ್ತಿಗೆ ಸರಸ್ವತಿ ದೇವಿ ಎಂದು ಗುರುತಿಸಲಾಗಿದೆ. ಭೂಕುಸಿತದಿಂದಾಗಿ ನ್ಯೂ ತೆಹ್ರಿ-ಚಂಬಾ ರಸ್ತೆಯ ಸಂಚಾರಕ್ಕೆ ತಡೆ ಉಂಟು ಮಾಡಿದೆ. ರಾಜ್ಯ ವಿಪತ್ತು ಪರಿಹಾರ ಪಡೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮಯೂರ್ ದೀಕ್ಷಿತ್, ಎಸ್ಎಸ್ಪಿ ಭುಲ್ಲರ್ ಮತ್ತು ಮುಖ್ಯ ಅಭಿವೃದ್ಧಿ ಅಧಿಕಾರಿ ಮನೀಶ್ ಕುಮಾರ್ ಸ್ಥಳದಲ್ಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತೆಹ್ರಿ ಗರ್ವಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಯೂರ್ ದೀಕ್ಷಿತ್ ಮತ್ತು ಮುಖ್ಯ ಅಭಿವೃದ್ಧಿ ಅಧಿಕಾರಿ ಮನೀಶ್ ಕುಮಾರ್ ಅವರು ಚಂಬಾ ಪೊಲೀಸ್ ಠಾಣೆಯ ಬಳಿ ಭೂಕುಸಿತ ಸ್ಥಳಕ್ಕೆ ತಲುಪಿದ್ದಾರೆ. ಭೂಕುಸಿತ ಉಂಟಾದ ಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ, ಲೋಕೋಪಯೋಗಿ ಇಲಾಖೆ, ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಸ್ಥಳದಲ್ಲಿ ಆರು ಮಣ್ಣು ಸಾಗಿಸುವ ಯಂತ್ರಗಳನ್ನು ನಿಯೋಜಿಸಲಾಗಿದೆ.
ಈ ಪ್ರದೇಶಕ್ಕೆ ವಿದ್ಯುತ್ ಸರಬರಾಜನ್ನು ಪುನಃಸ್ಥಾಪಿಸಲು ವಿದ್ಯುತ್ ಇಲಾಖೆ ಸಹ ಕೆಲಸ ಮಾಡುತ್ತಿದೆ ಎಂದು ತೆಹ್ರಿ ವಿಪತ್ತು ನಿರ್ವಹಣಾ ಅಧಿಕಾರಿ ಬ್ರಿಜೇಶ್ ಭಟ್ ಹೇಳಿದ್ದಾರೆ.
ಇದನ್ನೂ ಓದಿ : Land slide: ಮಣಿಪುರದಲ್ಲಿ ಭಾರಿ ಕುಸಿತ, ಏಳು ಸಾವು, 23 ಮಂದಿ ಇನ್ನೂ ಮಣ್ಣಿನೊಳಗೆ
ಚಂಬಾ ಪಟ್ಟಣದ ನಿವಾಸಿ ಉಪೇಂದ್ರ ಮಖ್ಲೋಗಾ ಮಾತನಾಡಿ, ದೊಡ್ಡ ಶಬ್ದವೊಂದು ಕೇಳಿಬಂತು ಮನೆಯಿಂದ ಹೊರಗೆ ಬಂದು ನೋಡಿದಾಗ ಭೂಕುಸಿತದಿಂದಾಗಿ ಇಡೀ ಪರ್ವತವು ಕುಸಿದಿರುವುದು ಕಂಡು ಬಂತು ಎಂದು ಹೇಳಿದ್ದಾರೆ
“ಪರ್ವತದ ಇಳಿಜಾರು ಸಡಿಲವಾದ ಬಂಡೆಗಳನ್ನು ಹೊಂದಿರುವುದರಿಂದ, ಭಾರಿ ಮಳೆಯೊಂದಿಗೆ ಅದು ಮತ್ತೆ ಕುಸಿಯಬಹುದು ಮತ್ತು ಇಲ್ಲಿ ಹೆಚ್ಚಿನ ಹಾನಿಯನ್ನು ಉಂಟುಮಾಡಬಹುದು ಎಂದು ನಾವು ಭಯಭೀತರಾಗಿದ್ದೇವೆ” ಎಂದು ಮತ್ತೊಬ್ಬ ನಿವಾಸಿ ವಿನೋದ್ ನೇಗಿ ಹೇಳಿದರು.