ಮುಂಬಯಿ: ವಾಣಿಜ್ಯ ನಗರಿ ಮುಂಬಯಿಯ ಕುರ್ಲಾದ ನಾಯಕ್ ನಗರದಲ್ಲಿ ನಿನ್ನೆ (ಜೂನ್ 27) ತಡರಾತ್ರಿ ನಾಲ್ಕು ಮಹಡಿಯ ಕಟ್ಟಡ ಕುಸಿದು ಮೂವರು ಮೃತಪಟ್ಟಿದ್ದಾರೆ. 13 ಮಂದಿ ಗಾಯಗೊಂಡಿದ್ದಾರೆ.
ಕಟ್ಟಡ ಕುಸಿತ ಸಂಭವಿಸಿದ ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಕಟ್ಟಡದ ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ.
ಮಹಾರಾಷ್ಟ್ರದ ಸಚಿವ ಆದಿತ್ಯ ಠಾಕ್ರೆ ತಡರಾತ್ರಿ 2 ಗಂಟೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿರುವ 13 ಮಂದಿಯನ್ನು ರಕ್ಷಣೆ ಮಾಡಿ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ 15 ಮಂದಿ ಕಟ್ಟಡದ ಅವೇಶೇಷಗಳಡಿ ಸಿಲುಕಿದ್ದಾರೆ ಎಂಬ ಶಂಕೆಯಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮತ್ತೊಂದು ಟ್ವೀಟ್ನಲ್ಲಿ ಶಿಥಿಲಗೊಂಡ ಕಟ್ಟಡಗಳಿಗೆ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನೀಡಿರುವ ನೋಟಿಸ್ನ್ನು ಈಗ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ| ಮುಂಬೈ ಕಟ್ಟಡ ಕುಸಿತದಲ್ಲಿ ಒಬ್ಬ ಸಾವು, 16 ಮಂದಿಗೆ ಗಂಭೀರ ಗಾಯ