ಮನಾಲಿ: ಉತ್ತರ ಭಾರತವನ್ನು ಮಳೆ-ಪ್ರವಾಹ ಸರ್ವನಾಶ (North India Floods) ಮಾಡುತ್ತಿರುವಂತೆ ಭಾಸವಾಗುತ್ತಿದೆ. ಅದರಲ್ಲೂ ಹಿಮಾಚಲ ಪ್ರದೇಶದಲ್ಲಿ (Himachal Rain)ಪರಿಸ್ಥಿತಿ ಭೀಕರವಾಗಿದೆ. ಹಲವು ಜಿಲ್ಲೆಗಳಲ್ಲಿ ಪ್ರವಾಹ ಅಬ್ಬರಿಸುತ್ತಿದೆ. ಸಿಕ್ಕಿದ್ದನ್ನೆಲ್ಲ ತನ್ನ ಸೆಳೆತಕ್ಕೆ ಎಳೆದುಕೊಳ್ಳುತ್ತ, ಕೊಚ್ಚಿಕೊಂಡು ಹೋಗುತ್ತಿವೆ. ಭೂಕುಸಿತ, ಮಣ್ಣುಕುಸಿತ, ಕಲ್ಲುಬಂಡೆಗಳು ಉರುಳಿ ಬೀಳುತ್ತಿರುವುದು, ಕಟ್ಟಡ, ಚಿಕ್ಕಪುಟ್ಟ ಮನೆಗಳು ಪ್ರವಾಹದ ಕಾರಣಕ್ಕೆ ಬೀಳುತ್ತಿರುವುದು ಹಿಮಾಚಲ ಪ್ರದೇಶದ ಸಾಮಾನ್ಯ ದೃಶ್ಯವಾಗಿದೆ. ಇದೀಗ ಪ್ರಸಿದ್ಧ ಪ್ರವಾಸಿ ತಾಣವಾದ ಮನಾಲಿಯಲ್ಲಿ 4 ಅಂತಸ್ತಿನ ಹೋಟೆಲ್ವೊಂದು ನೋಡನೋಡುತ್ತಿದ್ದಂತೆ, ಪೂರ್ತಿಯಾಗಿ ಕುಸಿದುಬಿದ್ದು, ಪ್ರವಾಹದಲ್ಲಿ ಕೊಚ್ಚಿಕೊಂಡ ಭಯಾನಕ ವಿಡಿಯೊ ವೈರಲ್ (Viral Video) ಆಗಿದ್ದು, ಹಿಮಾಚಲ ಪ್ರದೇಶದ ಮಳೆಯ ಭೀಕರತೆಗೆ ಹಿಡಿದ ಕೈಗನ್ನಡಿಯಾಗಿದೆ.
Manali Aallu ground…hotel washed away.#HIMACHALPRADESH #RAINFALL #Flood pic.twitter.com/CmgaU1oLj0
— Nitesh rathore (@niteshr813) July 10, 2023
ಮಳೆ ಪ್ರವಾಹಕ್ಕೆ ಹಿಮಾಚಲ ಪ್ರದೇಶ ಕೊಚ್ಚಿಕೊಂಡು ಹೋಗುತ್ತಿದೆ. ಇಲ್ಲಿ ಮನಾಲಿ ಸೇರಿ ಹಲವು ಪ್ರದೇಶಗಳಲ್ಲಿ ಅನೇಕ ಪ್ರವಾಸಿಗರು ಸಿಲುಕಿದ್ದಾರೆ. ಮಳೆ ಸಂಬಂಧಿ ಅನಾಹುತಗಳಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಡೀ ಉತ್ತರ ಭಾರತದಲ್ಲಿ 100ಕ್ಕೂ ಹೆಚ್ಚು ಸಾವಾಗಿದೆ. ಹಿಮಾಚಲ ಪ್ರದೇಶವೊಂದರಲ್ಲೇ 80 ಮಂದಿ ಮೃತಪಟ್ಟಿದ್ದಾರೆ. ಸುಮಾರು 92 ಜನರು ಗಾಯಗೊಂಡಿದ್ದಾರೆ. ಹಿಡಿದ ಮಳೆ ನಿಲ್ಲುತ್ತಿಲ್ಲ. ಪ್ರವಾಹದ ರಭಸ ಕಡಿಮೆಯಾಗುತ್ತಿಲ್ಲ. ಈಗಾಗಲೇ ಈ ರಾಜ್ಯದಲ್ಲಿ 79 ಮನೆಗಳು ಧ್ವಂಸಗೊಂಡಿವೆ. 333 ಮನೆಗಳು ಭಾಗಶಃ ಕುಸಿದುಬಿದ್ದಿವೆ. ಎಲ್ಲ ಸೇರಿ ಹಿಮಾಚಲ ಪ್ರದೇಶಕ್ಕೆ ಮಳೆಯಿಂದ ಆದ ನಷ್ಟ 1050 ಕೋಟಿ ರೂಪಾಯಿ. ಹಿಮಾಚಲ ಪ್ರದೇಶದ ಮಳೆಯ ಭೀಕರತೆ ತೋರಿಸುವ ಹಲವು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.