ಚೆನ್ನೈ: ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಉಚಿತವಾಗಿ ಹಂಚಲಾಗುತ್ತಿದ್ದ ಸೀರೆ, ಧೋತಿ ಹಾಗೂ ಪಂಚೆಗಳನ್ನು ಪಡೆಯುವ ವೇಳೆ ಕಾಲ್ತುಳಿತ (Stampede In Tamil Nadu) ಉಂಟಾಗಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ನೂಕುನುಗ್ಗಲು, ಕಾಲ್ತುಳಿತದಲ್ಲಿ ೧೨ ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ತಿರುಪತ್ತೂರು ಜಿಲ್ಲೆಯ ವಾನಿಯಾಂಬಡಿ ಗ್ರಾಮದಲ್ಲಿ ತಾಯಿಪುಸಮ್ ಹಬ್ಬ ಆಚರಿಸಲಾಗುತ್ತದೆ. ಇದೇ ವೇಳೆ ವ್ಯಕ್ತಿಯೊಬ್ಬರು ಸೀರೆ, ಧೋತಿ ಹಾಗೂ ಪಂಚೆಗಳನ್ನು ಉಚಿತವಾಗಿ ನೀಡಲು ಆರಂಭಿಸಿದ್ದಾರೆ. ಆಗ ಸಾವಿರಾರು ಮಹಿಳೆಯರು ಟೋಕನ್ ಪಡೆಯಲು ಸಾಲಾಗಿ ನಿಂತಿದ್ದು, ನೂಕುನುಗ್ಗಲು ಉಂಟಾಗಿದೆ. ನೂಕುನುಗ್ಗಲು ಕಾಲ್ತುಳಿತವಾಗಿ ಮಾರ್ಪಟ್ಟು ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ.
ಗಾಯಾಳುಗಳ ಸಂಖ್ಯೆ ಜಾಸ್ತಿಯಾಗುವ ಲಕ್ಷಣಗಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೃತರ ಕುಟುಂಬಸ್ಥರಿಗೆ ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಆಂಧ್ರಪ್ರದೇಶದಲ್ಲಿ ಎಂ.ಚಂದ್ರಬಾಬು ನಾಯ್ಡು ರ‍್ಯಾಲಿ ವೇಳೆ ಕಾಳ್ತುಳಿತ ಉಂಟಾಗಿ ಹಲವು ಜನ ಮೃತಪಟ್ಟಿದ್ದರು.
ಇದನ್ನೂ ಓದಿ: Andhra Pradesh Stampede | ಚಂದ್ರಬಾಬು ನಾಯ್ಡು ರ‍್ಯಾಲಿ ವೇಳೆ ಮತ್ತೆ ಕಾಲ್ತುಳಿತ, ಮೂವರ ಸಾವು, ಹಲವರಿಗೆ ಗಾಯ