Site icon Vistara News

Satya Pal Malik: ಪುಲ್ವಾಮ ದಾಳಿಗೆ ಮೋದಿ ನಿರ್ಲಕ್ಷ್ಯ ಕಾರಣ; ಸತ್ಯಪಾಲ್‌ ಮಲಿಕ್‌ ಗಂಭೀರ ಆರೋಪ

Satya Pal Malik

Premises of Satya Pal Malik’s former staff among 12 places raided by CBI

ನವದೆಹಲಿ: ಜಮ್ಮು-ಕಾಶ್ಮೀರ ಮಾಜಿ ಲೆಫ್ಟಿನೆಂಟ್‌ ಗವರ್ನರ್‌ ಸತ್ಯಪಾಲ್‌ ಮಲಿಕ್‌ (Satya Pal Malik) ಅವರು ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯಲ್ಲಿಯೇ ಇದ್ದು, ಕೇಂದ್ರ ಸರ್ಕಾರವನ್ನು ಹಲವು ಬಾರಿ ಟೀಕಿಸಿರುವ ಸತ್ಯಪಾಲ್‌ ಮಲಿಕ್‌ ಅವರೀಗ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “2019ರಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ವೈಫಲ್ಯದಿಂದಾಗಿಯೇ ದಾಳಿ ನಡೆಯಿತು. ಕೇಂದ್ರದ ಅಸಮರ್ಥತೆಯಿಂದಾಗಿಯೇ ದೇಶದ 40 ಯೋಧರು ಹುತಾತ್ಮರಾದರು. ಆದರೆ, ಮೋದಿ ಅವರೇ ನಮ್ಮನ್ನು ಈ ಕುರಿತು ಮಾತನಾಡದಂತೆ ಸುಮ್ಮನಾಗಿಸಿದರು” ಎಂದು ಹೇಳಿದ್ದಾರೆ.

ದಿ ವೈರ್‌ಗೆ ಸಂದರ್ಶನ ನೀಡಿದ ಅವರು ಮಹತ್ವದ ವಿಷಯವನ್ನು ಪ್ರಸ್ತಾಪಿಸಿದರು. “ಹೆಚ್ಚಿನ ಯೋಧರು ಬೇರೆಡೆ ತೆರಳಬೇಕಾದ ಕಾರಣ ವಿಮಾನಗಳ ವ್ಯವಸ್ಥೆ ಮಾಡುವಂತೆ ಗೃಹ ಸಚಿವಾಲಯಕ್ಕೆ ಸಿಆರ್‌ಪಿಎಫ್‌ ಮನವಿ ಮಾಡಿತ್ತು. ಆದರೆ, ಗೃಹ ಸಚಿವಾಲಯವು ವಿಮಾನಗಳ ವ್ಯವಸ್ಥೆ ಮಾಡಲು ನಿರಾಕರಿಸಿತು. ಕೇವಲ ಐದು ವಿಮಾನಗಳ ವ್ಯವಸ್ಥೆ ಮಾಡಲು ಸರ್ಕಾರ ಒಪ್ಪಲಿಲ್ಲ. ಕೊನೆಗೆ ಸೇನೆಯ ವಾಹನಗಳಲ್ಲೇ ಯೋಧರು ತೆರಳಬೇಕಾಯಿತು. ಆದರೆ, ವಾಹನಗಳ ಮೇಲೆಯೇ ಉಗ್ರರು ದಾಳಿ ನಡೆಸಿದರು” ಎಂದು ಹೇಳಿದರು. 2019ರ ಫೆಬ್ರವರಿ 14ರಂದು ಸೇನಾ ವಾಹನಗಳ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದರು. ಇದರಲ್ಲಿ ದೇಶದ 40 ಯೋಧರು ಹುತಾತ್ಮರಾದರು.

ಸತ್ಯಪಾಲ್‌ ಮಲಿಕ್‌ ಹೇಳಿದ್ದೇನು?

“ನಮ್ಮ ಭದ್ರತಾ ವೈಫಲ್ಯದಿಂದಾಗಿಯೇ ಪುಲ್ವಾಮ ದಾಳಿ ನಡೆಯಿತು. ಕೇಂದ್ರ ಸರ್ಕಾರದ ಅಸಮರ್ಥತೆಯಿಂದಾಗಿಯೇ ದುರಂತ ಸಂಭವಿಸಿತು. ಆದರೆ, ಆಗ ಮೋದಿ ಅವರು ನಮ್ಮನ್ನು ಸುಮ್ಮನಾಗಿಸಿದರು. ಉತ್ತರಾಖಂಡದ ಕಾರ್ಬೆಟ್‌ ನ್ಯಾಷನಲ್‌ ಪಾರ್ಕ್‌ಗೆ ಕರೆದು ಈ ಪ್ರಕರಣದ ಕುರಿತು ಮಾತನಾಡದಂತೆ ತಡೆದರು” ಎಂದು ಹೇಳಿದ್ದಾರೆ. ಹಾಗೆಯೇ, ಭ್ರಷ್ಟಾಚಾರದ ಕುರಿತು ಕೂಡ ಸತ್ಯಪಾಲ್‌ ಮಲಿಕ್‌ ಮಾತನಾಡಿದ್ದು, “ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲ. ಅದಕ್ಕೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೆಯೇ, ಅವರಿಗೆ ಯಾವ ವಿಷಯದ ಕುರಿತು ಕೂಡ ಮಾಹಿತಿ ಇರುವುದಿಲ್ಲ” ಎಂದು ದೂರಿದರು. ಪುಲ್ವಾಮ ದಾಳಿ ನಡೆದಾಗ ಸತ್ಯಪಾಲ್‌ ಮಲಿಕ್‌ ಅವರು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಆಗಿದ್ದರು.

ರಾಹುಲ್‌ ಗಾಂಧಿ ಲೇವಡಿ

ಮೋದಿ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

ಸತ್ಯಪಾಲ್‌ ಮಲಿಕ್‌ ಅವರ ಹೇಳಿಕೆ ಪ್ರಸ್ತಾಪಿಸಿ ನರೇಂದ್ರ ಮೋದಿ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. “ನರೇಂದ್ರ ಮೋದಿ ಅವರು ಭ್ರಷ್ಟಾಚಾರವನ್ನು ತುಂಬ ದ್ವೇಷ ಮಾಡುವುದಿಲ್ಲ” ಎಂದು ರಾಹುಲ್‌ ಗಾಂಧಿ ವ್ಯಂಗ್ಯ ಮಾಡಿದ್ದಾರೆ. ಇನ್ನು ಕಾಂಗ್ರೆಸ್‌ ಕೂಡ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. “ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿಯೇ ಪುಲ್ವಾಮ ದಾಳಿ ನಡೆದು, ದೇಶದ ಯೋಧರು ಹುತಾತ್ಮರಾದರು. ಯೋಧರಿಗೆ ವಿಮಾನ ವ್ಯವಸ್ಥೆ ಮಾಡಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ” ಎಂದು ಮಲಿಕ್‌ ಹೇಳಿಕೆಯ ವಿಡಿಯೊ ಟ್ವೀಟ್‌ ಮಾಡಿ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: Revdi Culture | ಸತ್ಯಪಾಲ್‌ ಮಲಿಕ್‌ ಹೇಳಿಕೆ ಉಲ್ಲೇಖಿಸಿಯೇ ಮೋದಿಗೆ ಟಾಂಗ್‌ ಕೊಟ್ಟ ಕಾಂಗ್ರೆಸ್

Exit mobile version