Site icon Vistara News

40 ಗಂಟೆ ದೇಶಕ್ಕಾಗಿ, 30 ಗಂಟೆ ನಿಮಗಾಗಿ; ಮೂರ್ತಿ ಹೇಳಿಕೆ ಬೆಂಬಲಿಸಿದ ಟೆಕ್‌ ಮಹೀಂದ್ರಾ ಸಿಇಒ

Narayana Murthy Row

40 hours for country, 30 for yourself: Tech Mahindra CEO backs Narayana Murthy

ನವದೆಹಲಿ: ದೇಶದ ಏಳಿಗೆ ದೃಷ್ಟಿಯಿಂದ ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್.‌ ನಾರಾಯಣ ಮೂರ್ತಿ (N R Narayana Murthy) ಅವರು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಒಂದಷ್ಟು ಜನ ಪರವಾಗಿದ್ದರೆ, ಮತ್ತೊಂದಿಷ್ಟು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಟೆಕ್‌ ಮಹೀಂದ್ರಾ (Tech Mahindra) ಸಿಇಒ ಸಿ.ಪಿ. ಗುರ್ನಾನಿ (CP Gurnani) ಅವರು ಮೂರ್ತಿ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. “ಯುವಕರು ವಾರದಲ್ಲಿ 40 ಗಂಟೆ ದೇಶಕ್ಕಾಗಿ, 30 ಗಂಟೆ ತಮಗಾಗಿ ಕೆಲಸ ಮಾಡಬೇಕು” ಎಂದಿದ್ದಾರೆ.

“ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂಬುದಾಗಿ ನಾರಾಯಣ ಮೂರ್ತಿ ಅವರು ನೀಡಿದ ಹೇಳಿಕೆಯ ಕುರಿತು ಚರ್ಚೆ ನಡೆಯುತ್ತಿರುವ ಬಗ್ಗೆ ಓದಿದೆ. ನಾರಾಯಣ ಮೂರ್ತಿ ಅವರು ಯಾವಾಗ ಮಾತನಾಡಿದರೂ, ಅದು ಕೇವಲ ಕಂಪನಿಗೆ ಸಂಬಂಧಿಸಿರುವುದಿಲ್ಲ ಎಂಬುದು ನನ್ನ ನಂಬಿಕೆ. ಅವರು 70 ಗಂಟೆಯೂ ಕಂಪನಿಗಾಗಿಯೇ ಕೆಲಸ ಮಾಡಬೇಕು ಎಂದು ಹೇಳಿಲ್ಲ. 40 ಗಂಟೆ ಕಂಪನಿಗಾಗಿ, 30 ಗಂಟೆ ನಿಮಗಾಗಿ ಕೆಲಸ ಮಾಡಿ ಎಂಬುದಾಗಿ ಹೇಳಿದ್ದಾರೆ. ಯಾವುದೇ ಕ್ಷೇತ್ರದಲ್ಲಿ 10 ಸಾವಿರ ಗಂಟೆ ಕೆಲಸ ಮಾಡಿದರೆ, ಆ ಕ್ಷೇತ್ರದಲ್ಲಿ ತಜ್ಞರಾಗುತ್ತಾರೆ. ಯುವಕರು ದೇಶವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು” ಎಂದಿದ್ದಾರೆ.

ಇದಕ್ಕೂ ಮೊದಲು ಜೆಎಸ್‌ಡಬ್ಲ್ಯೂ ಸ್ಟೀಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್‌ ಜಿಂದಾಲ್‌ ಅವರು ಮೂರ್ತಿ ಹೇಳಿಕೆಯನ್ನು ಬೆಂಬಲಿಸಿದ್ದರು. “ಪ್ರಧಾನಿ ನರೇಂದ್ರ ಮೋದಿ ಅವರು ನಿತ್ಯ 14-16 ಗಂಟೆ ಕೆಲಸ ಮಾಡುತ್ತಿದ್ದರು. ನನ್ನ ತಂದೆ ವಾರದ ಏಳು ದಿನವೂ 12-14 ಗಂಟೆ ಕೆಲಸ ಮಾಡುತ್ತಿದ್ದರು. ನಾನು ಪ್ರತಿದಿನ 10-12 ತಾಸು ಕೆಲಸ ಮಾಡುತ್ತೇನೆ. ದೇಶದ ಏಳಿಗೆಗೆ ಕೆಲಸ ಮಾಡುವ ಪ್ರವೃತ್ತಿ ನಮ್ಮಲ್ಲಿದೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಮೂರ್ತಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಇದನ್ನೂ ಓದಿ: ವಾರಕ್ಕೆ 70 ಗಂಟೆ ಕೆಲಸ; ಮೋದಿ ಉದಾಹರಣೆ ಕೊಟ್ಟು ಮೂರ್ತಿ ಹೇಳಿಕೆಗೆ ಉದ್ಯಮಿಗಳ ಬೆಂಬಲ

ನಾರಾಯಣ ಮೂರ್ತಿ ಹೇಳಿದ್ದೇನು?

ಇನ್ಫೋಸಿಸ್‌ನ ಮಾಜಿ ಸಿಎಫ್ಒ ಮೋಹನ್‌ದಾಸ್ ಪೈ ಅವರೊಂದಿಗಿನ ಮಾತುಕತೆಯಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು, “ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು, ಭಾರತದ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕಾಗುತ್ತದೆ. ಎರಡನೇ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿ ಯುವಕರು ಇದೇ ರೀತಿ ಮಾಡಿದ್ದರು” ಎಂದು ಹೇಳಿದ್ದರು.

ಇದನ್ನೂ ಓದಿ: Narayana Murthy: ವಾರಕ್ಕೆ 70 ತಾಸು ದುಡಿಯಿರಿ ಎಂದ ಇನ್ಫಿ ಮೂರ್ತಿ ವಿರುದ್ಧ ಆಕ್ರೋಶ!

“ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ನಾವು ನಮ್ಮ ಕೆಲಸದ ಉತ್ಪಾದಕತೆಯನ್ನು ಸುಧಾರಿಸದ ಹೊರತು, ನಾವು ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡದ ಹೊರತು ನಾವು ಪ್ರಚಂಡ ಪ್ರಗತಿಯನ್ನು ಸಾಧಿಸಿದ ದೇಶಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ” ಎಂದು ಇನ್ಫೋಸಿಸ್ ನಾರಾಯಣಮೂರ್ತಿ ತಿಳಿಸಿದ್ದರು. ಆದಾಗ್ಯೂ, ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಮತ್ತೊಂದಿಷ್ಟು ಜನ ಬೆಂಬಲಿಸಿದ್ದಾರೆ.

Exit mobile version