ಲಖನೌ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ೪೦% ಕಾಮಗಾರಿ ಪೂರ್ಣವಾಗಿದ್ದು, ೨೦೨೪ರ ಆರಂಭದ ವೇಳೆಗೆ ದೇವಾಲಯದ ಮೊದಲ ಅಂತಸ್ತು ಸಿದ್ಧವಾಗಲಿದೆ ಎಂದು ಯೋಜನೆಯ ಎಂಜಿನಿಯರ್‌ಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ವರ್ಷಗಳ ಹಿಂದೆ ಭೂಮಿ ಪೂಜೆ ನೆರವೇರಿಸಿದ್ದರು. ಮಂದಿರದ ಸ್ತಂಭಗಳ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ.
ಗರ್ಭಗುಡಿಯ ನಿರ್ಮಾಣ ಆರಂಭ: ಅಯೋಧ್ಯೆಯಲ್ಲಿ ರಾಮ ಮಂದಿರದ ಗರ್ಭಗುಡಿಯ ನಿರ್ಮಾಣವನ್ನೂ ಆರಂಭಿಸಲಾಗಿದೆ. ದೇವಾಲಯದ ಗೋಡೆಗಳಿಗೆ ರಾಜಸ್ಥಾನದಿಂದ ತರಿಸಿದ ಶಿಲೆಗಳನ್ನು ( pink sandstone) ಬಳಸಲಾಗುತ್ತಿದೆ. ನೆಲ ಅಂತಸ್ತಿನಲ್ಲಿ ಕೆತ್ತನೆಯ ಕಲ್ಲುಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ ಎಂದು ಕಾಮಗಾರಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವವರಲ್ಲಿ ಒಬ್ಬರಾದ ಜಗದೀಶ್ ಹೇಳಿದ್ದಾರೆ.
ರಾಜಸ್ಥಾನದ ಶಿಲೆಗಳಲ್ಲಿ ತಯಾರಿಸಿದ ಸ್ತಂಭಗಳನ್ನು ಕ್ರೇನ್‌ಗಳ ಮೂಲಕ ಎತ್ತಲಾಗುತ್ತಿದೆ. ೨೦೨೪ರ ಲೋಕಸಭೆ ಚುನಾವಣೆಗೆ ಮುನ್ನ ರಾಮ ಮಂದಿರ ಭಕ್ತಾದಿಗಳ ಭೇಟಿಗೆ ತೆರೆದುಕೊಳ್ಳಲಿದೆ.
ದೇವಾಲಯದ ಯೋಜನೆಗೆ ೮ರಿಂದ ೯ ಲಕ್ಷ ಕ್ಯೂಬಿಕ್ ಅಡಿಯಷ್ಟು ಕೆತ್ತನೆಯ ಶಿಲೆಗಳನ್ನು ಬಳಸಲಾಗುತ್ತಿದೆ. ೬.೩೭ ಲಕ್ಷ ಕ್ಯೂಬಿಕ್ ಅಡಿಯಷ್ಟು ಕೆತ್ತನೆಯಿರದ ಗ್ರಾನೈಟ್ ಅನ್ನು ಬಳಸಲಾಗುತ್ತಿದೆ. ಗರ್ಭಗುಡಿ ನಿರ್ಮಾಣಕ್ಕೆ ರಾಜಸ್ಥಾನದ ಮಕಾರ್ನಾ ಬೆಟ್ಟಗಳಿಂದ ತರಿಸಿದ ಶ್ವೇತವರ್ಣದ ಮಾರ್ಬಲ್‌ಗಳನ್ನು ಬಳಸಲಾಗುತ್ತದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದಲೂ ಶಿಲೆಗಳನ್ನು ತರಿಸಿಕೊಳ್ಳಲಾಗಿದೆ. ೨೦೨೦ರ ಆಗಸ್ಟ್‌ನಲ್ಲಿ ಅಯೋಧ್ಯೆ ದೇವಾಲಯಕ್ಕೆ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದ್ದರು.
ರಾಮ ಮಂದಿರದ ಶಂಕು ಸ್ಥಾಪನೆಯ ದಿನಾಚರಣೆ ವೇಳೆ ಕಾಂಗ್ರೆಸ್ ನಾಯಕರು ದುರುದ್ದೇಶಪೂರ್ವಕವಾಗಿಯೇ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯ ನೆಪದಲ್ಲಿ ಕಪ್ಪು ಬಣ್ಣದ ಉಡುಪು ತೊಟ್ಟು ರಾಮ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.