ಪುಣೆ: ಇಂಡಿಗೊ ವಿಮಾನದ ಪೈಲಟ್ ಒಬ್ಬರು ನಾಗ್ಪುರ ವಿಮಾನ ನಿಲ್ದಾಣದ ಬೋರ್ಡಿಂಗ್ ಗೇಟ್ನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ವಿಮಾನ ಹಾರಾಟಕ್ಕಾಗಿ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಅವರು ಹೃದಯ ಸ್ತಂಭನದಿಂದ ಅವರು ಮೃತಪಟ್ಟಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ಕ್ಯಾಪ್ಟನ್ ಮನೋಜ್ ಸುಬ್ರಮಣ್ಯಂ (40) ಎಂದು ಮೃಪಟ್ಟ ಪೈಲಟ್. ನಾಗ್ಪುರ-ಪುಣೆ 6 ಇ 135 ವಿಮಾನವನ್ನು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರು ಹಾರಿಸಬೇಕಾಗಿತ್ತು ಅವರು ಮಧ್ಯಾಹ್ನ 12.05 ರ ಸುಮಾರಿಗೆ ಕುಸಿದುಬಿದ್ದಿದ್ದಾರೆ.
ಪೈಲಟ್ ಹಠಾತ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಕಿಮ್ಸ್-ಕಿಂಗ್ಸ್ವೆ ಆಸ್ಪತ್ರೆಯ ವಕ್ತಾರ ಏಜಾಜ್ ಶಮಿ ತಿಳಿಸಿದ್ದಾರೆ. ವಿಮಾನ ನಿಲ್ದಾಣದ ನಿರ್ದೇಶಕ ಅಬಿದ್ ರುಹಿ ಮಾತನಾಡಿ, ಪೈಲಟ್ ಕುಸಿದುಬಿದ್ದ ನಂತರ ತುರ್ತು ತಂಡವು ಸಿಪಿಆರ್ (ಕಾರ್ಡಿಯೋಪಲ್ಮೊನರಿ ರೆಸ್ಕ್ಯುಸಿಯೇಷನ್ ) ನೀಡಿತು. ಆದರೆ ಅವರು ಪ್ರತಿಕ್ರಿಯಿಸಿರಲಿಲ್ಲ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ವಿಮಾನಯಾನ ವಕ್ತಾರರು, ನಾಗ್ಪುರದಲ್ಲಿ ನಮ್ಮ ಪೈಲಟ್ ಒಬ್ಬರ ನಿಧನದಿಂದ ನಾವು ದುಃಖಿತರಾಗಿದ್ದೇವೆ. ನಾಗ್ಪುರ ವಿಮಾನ ನಿಲ್ದಾಣದಲ್ಲಿ ಅನಾರೋಗ್ಯಕ್ಕೆ ಒಳಗಾದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ದುರದೃಷ್ಟವಶಾತ್ ನಿಧನರಾದರು. ನಮ್ಮ ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗಾಗಿ ಎಂದು ಟ್ವೀಟ್ ಮಾಡಿದ್ದಾರೆ.
ಸುಬ್ರಮಣ್ಯಂ ಅವರು ದಿನದ ತಮ್ಮ ಮೊದಲ ವಿಮಾನವನ್ನು ನಿರ್ವಹಿಸುತ್ತಿದ್ದಾಗ ಕುಸಿದುಬಿದ್ದರು ಎಂದು ರುಹಿ ಹೇಳಿದ್ದಾರೆ. ಅದಕ್ಕಿಂತ ಮೊದಲು ಅವರು 27 ಗಂಟೆಗಳ ವಿಶ್ರಾಂತಿಯನ್ನು ಪಡೆದುಕೊಂಡಿದ್ದರು. ನಾಗ್ಪುರ-ಪುಣೆ ವಲಯ ಸೇರಿದಂತೆ ನಾಲ್ಕು ವಲಯಗಳನ್ನು ಇಂದು ನಿರ್ವಹಿಸಬೇಕಾಗಿತ್ತು ಎಂದು ಅವರು ಹೇಳಿದರು.
ಪೈಲಟ್ ಬುಧವಾರ ಎರಡು ವಲಯಗಳನ್ನು ನಿರ್ವಹಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : WhatsApp New Feature: ವಾಟ್ಸಾಪ್‌ನಲ್ಲಿ ಇನ್ನು ಎಚ್‌ಡಿ ಫೋಟೋ ಕಳುಹಿಸಬಹುದು!
ಸುಬ್ರಮಣ್ಯಂ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ನಾಳೆ (ಶುಕ್ರವಾರ) ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ವೈದ್ಯಕೀಯ ಕಾಲೇಜಿನ ಡೀನ್ ಡಾ.ರಾಜ್ ಗಜ್ಭಿಯೆ ತಿಳಿಸಿದ್ದಾರೆ.
ಘಟನೆಯಿಂದಾಗಿ ನಾಗ್ಪುರ-ಪುಣೆ ವಿಮಾನವು ಘಟನೆಯ ನಂತರ ಸುಮಾರು 15 ನಿಮಿಷ ವಿಳಂಬವಾಯಿತು ಮತ್ತು ಮಧ್ಯಾಹ್ನ 1.15 ರ ಸುಮಾರಿಗೆ ಹೊರಟಿತು.
ದೆಹಲಿ-ದೋಹಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕತಾರ್ ಏರ್ವೇಸ್ನ ಹಿರಿಯ ಪೈಲಟ್ ಹೃದಯಾಘಾತದಿಂದ ಸಾವನ್ನಪ್ಪಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಅವರು ಈ ಹಿಂದೆ ಸ್ಪೈಸ್ ಜೆಟ್ ಮತ್ತು ಅಲಯನ್ಸ್ ಏರ್ ನಲ್ಲಿ ಕೆಲಸ ಮಾಡಿದ್ದರು.