ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಇನ್ನು ಕೇವಲ 400 ದಿನಗಳು ಉಳಿದಿದ್ದು, ಮತದಾರರನ್ನು ತಲುಪಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಹೇಳಿದ್ದಾರೆ. ಪ್ರತಿ ಚುನಾವಣೆಯಲ್ಲೂ ಮೋದಿಯನ್ನೇ ಅವಲಂಬಿಸಬೇಡಿ ಎಂದೂ ಅವರು ಮನವರಿಕೆ ಮಾಡಿದ್ದಾರೆ.
ಈ ವಿಷಯವನ್ನು ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು ದಿಲ್ಲಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು(BJP Executive Meeting).
ನಮಗೆ 400 ದಿನಗಳು ಉಳಿದಿವೆ. ನಾವು ಜನರ ಸೇವೆಗಾಗಿ ಎಲ್ಲವನ್ನೂ ಮಾಡಬೇಕಾಗಿದೆ. ನಾವು ಇತಿಹಾಸವನ್ನು ರಚಿಸಬೇಕಾಗಿದೆ ಎಂಬ ಮೋದಿ ಅವರು ಹೇಳಿದ್ದಾರೆಂದು ಫಡ್ನವಿಸ್ ಸುದ್ದಿಗಾರರಿಗೆ ತಿಳಿಸಿದರು. 9 ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಆಯೋಜಿಸಲಾಗಿದೆ.
18ರಿಂದ 25 ವರ್ಷದೊಳಗಿನ ಮತದಾರರ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ಈ ವರ್ಗದ ಮತದಾರರಿಗೆ ಇತಿಹಾಸ ಹಾಗೂ ಹಿಂದಿನ ಆಡಳಿತಗಳ ಭ್ರಷ್ಟಾಚಾರ, ತಪ್ಪು ಕೆಲಸಗಳ ಬಗ್ಗೆ ತಿಳಿದಿಲ್ಲ. ನಾವು ಉತ್ತಮ ಆಡಳಿತದ ಕಡೆಗೆ ಹೇಗೆ ಹೋಗುತ್ತಿದ್ದೇವೆ ಎಂದು ಅವರಿಗೆ ತಿಳಿಸಿಕೊಡಬೇಕು. ಅವರಿಗೆ ಪ್ರಜಾಸತ್ತಾತ್ಮಕ ಮಾರ್ಗಗಳನ್ನು ಪರಿಚಯಿಸಬೇಕು ಮತ್ತು ಉತ್ತಮ ಆಡಳಿತದ ಭಾಗವಾಗಲು ಅವರಿಗೆ ಸಹಾಯ ಮಾಡಬೇಕು ಎಂದು ಮೋದಿ ಹೇಳಿದ ಸಂಗತಿಗಳನ್ನು ಫಡ್ನವಿಸ್ ಅವರು ಹೇಳಿದರು.
ಅಲ್ಪಸಂಖ್ಯಾತರಾದ ಬೋಹ್ರಾಗಳು, ಪಸ್ಮಾಂಡಾಗಳು ಮತ್ತು ಸಿಖ್ಖರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವಂತೆ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು. ಗಡಿ ಪ್ರದೇಶಗಳು ಸೇರಿದಂತೆ ಹಳ್ಳಿಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವತ್ತ ಪಕ್ಷದ ನಾಯಕರು ಗಮನಹರಿಸಬೇಕು ಎಂಬ ಪ್ರಧಾನಿಯ ಮಾತುಗಳನ್ನು ಉಲ್ಲೇಖಿಸಿ ಫಡ್ನವಿಸ್ ಹೇಳಿದರು.
ಇದನ್ನೂ ಓದಿ | BJP Meeting | ಬಿಜೆಪಿ ಕಾರ್ಯಕಾರಿಣಿ; 2024ರ ಲೋಕಸಭೆ, 9 ವಿಧಾನಸಭೆ ಚುನಾವಣೆಗೆ ಪಕ್ಷ ರಣತಂತ್ರ, ರವಿಶಂಕರ್ ಪ್ರಸಾದ್ ಮಾಹಿತಿ