ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi Excise policy case) ಸಂಬಂಧಿಸಿದಂತೆ ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರೀಗ ಜೈಲುಗಳ ಹಿಂದೆ ಇದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತಿರುವಾಗಲೇ, ಜಾರಿ ನಿರ್ದೇಶನಾಲಯವು(Enforcement Directorate – ED) ತನಿಖೆ ನಡೆಸುತ್ತಿದೆ. ದಿಲ್ಲಿ ಅಬಕಾರಿ ನೀತಿಯ ಪರವಾಗಿ ಜನಾಭಿಪ್ರಾಯವನ್ನು ರೂಪಿಸಲು ಆಮ್ ಆದ್ಮಿ ಪಾರ್ಟಿ(AAP) ಕರೆ ನೀಡಿದ್ದು, ಕಣ್ಣೊರೆಸುವ ತಂತ್ರವಾಗಿತ್ತು ಎಂಬುದು ಈಗ ಮಾಹಿತಿ ಬಹಿರಂಗವಾಗಿದೆ. ದಿಲ್ಲಿ ಸರ್ಕಾರವು ಇದಕ್ಕಾಗಿ ಪಿಆರ್ ಕಂಪನಿಗಳನ್ನು ನೇಮಕ ಮಾಡಿಕೊಂಡು, 4000 ಇ ಮೇಲ್‌ಗಳನ್ನು ನೀತಿಯ ಪರವಾಗಿ ಮಾಡಲಾಗಿತ್ತು ಎಂಬದು ಗೊತ್ತಾಗಿದೆ. ಏತನ್ಮಧ್ಯೆ, ಡಿಸಿಎಂ ಮನೀಶ್ ಸಿಸೋಡಿಯಾ ಅವರು ತಮ್ಮ ಬಂಧನವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಕಳೆದ ತಿಂಗಳು ಸಲ್ಲಿಸಿದ ತನ್ನ ಚಾರ್ಜ್ ಶೀಟ್‌ನಲ್ಲಿ ಜಾರಿ ನಿರ್ದೇಶನಾಲಯವು ಈ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಅಬಕಾರಿ ನೀತಿಯ ಮೇಲೆ ಪ್ರಭಾವ ಬೀರಲು ದಿಲ್ಲಿ ಸರ್ಕಾರಕ್ಕೆ ಬಾಡಿಗೆ ಪಿಆರ್ ಕಂಪನಿಗಳಿಂದ ಸುಮಾರು 4,000 ಇಮೇಲ್‌ಗಳನ್ನು ಕಳುಹಿಸಲಾಗಿತ್ತು ಎಂದು ಗೊತ್ತಾಗಿದೆ. ಈ ಪ್ರಕರಣವನ್ನು ಸಿಬಿಐ ಕೂಡ ತನಿಖೆ ನಡೆಸುತ್ತಿದ್ದು, ಅದರ ಭಾಗವಾಗಿಯೇ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದೆ.
ಅಬಕಾರಿ ನೀತಿಯ ಪರವಾಗಿ ಮೇಲೆ ಪ್ರಭಾವ ಬೀರಲು, 4,000 ಇಮೇಲ್‌ಗಳನ್ನು ದಿಲ್ಲಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ನೇಮಿಸಲ್ಪಟ್ಟ ಮಾಧ್ಯಮ ಏಜೆನ್ಸಿಗಳ ಮೂಲಕ ಅಧಿಕಾರಿಗಳಿಗೆ 4,000 ಇಮೇಲ್‌ಗಳನ್ನು ಕಳುಹಿಸುವ ಸಂಚಿನ ಹಿಂದೆ ಬೆನೊಯ್ ಬಾಬು ಎಂಬುವವರಿದ್ದರು ಎಂಬ ಮಾಹಿತಿ ತನಿಖೆ ವೇಳೆ ಗೊತ್ತಾಗಿದೆ. ಈ ಇಮೇಲ್‌ಗಳಲ್ಲಿ ಹೆಚ್ಚಿನವು ಇಮೇಲ್ ಐಡಿಗಳನ್ನು ಹೊಸದಾಗಿ ರಚಿಸುವ ಮೂಲಕ ಕಳುಹಿಸಲಾಗಿದೆ. ಆ ಮೂಲಕ ಸಾರ್ವಜನಿಕರೇ ಅಧಿಕಾರಿಗಳಿಗೆ ಇಮೇಲ್‌ಗಳನ್ನು ಕಳುಹಿಸಿದ್ದಾರೆಂಬುದನ್ನು ಬಿಂಬಿಸಲು ಈ ರೀತಿ ಮಾಡಲಾಗಿತ್ತು ಎಂದು ಇ.ಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: Delhi excise policy case | ಹಣ ಅಕ್ರಮ ವರ್ಗಾವಣೆ, ಫಾರ್ಮಾ ಕಂಪನಿ ಮಾಲೀಕ ಸೇರಿ ಇಬ್ಬರ ಸೆರೆ
ಸುಪ್ರೀಂ ಕೋರ್ಟ್ ಮೊರೆ ಹೋದ ಮನೀಶ್ ಸಿಸೋಡಿಯಾ
ತಮ್ಮನ್ನು ಸಿಬಿಐ ಬಂಧಿಸಿರುವುದನ್ನು ಪ್ರಶ್ನಿಸಿ ದಿಲ್ಲಿಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಅರ್ಜಿಯನ್ನು ತ್ವರಿತ ಹಾಗೂ ಆದ್ಯತೆಯ ಮೇರೆ ವಿಚಾರಣೆ ನಡೆಸುವಂತೆ ಅವರು ಸುಪ್ರೀಂ ಕೋರ್ಟ್ ಕೋರಿದ್ದಾರೆಂದು ಹೇಳಲಾಗಿದೆ. ದಿಲ್ಲಿ ಅಬಕಾರಿ ನೀತಿ ಹಗರಣದ ಹಿನ್ನೆಲೆಯಲ್ಲಿ ಸಿಬಿಐ ಭಾನುವಾರ ಸಿಸೋಡಿಯಾವನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.