ಲಖನೌ: ನೇಪಾಳ ಗಡಿಯಲ್ಲಿರುವ ಸುಮಾರು 4 ಸಾವಿರ ಮದರಸಾಗಳ (Madrasas) ವಿರುದ್ಧ ತನಿಖೆ ನಡೆಸಲು ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಉತ್ತರ ಪ್ರದೇಶ ಸರ್ಕಾರವು (Uttar Pradesh Government) ಆದೇಶಿಸಿದೆ. ವಿದೇಶಗಳಿಂದ ದೇಣಿಗೆ ಪಡೆದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಿದೆ.
ಭಯೋತ್ಪಾದನೆ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ADG) ಮೋಹಿತ್ ಅಗರ್ವಾಲ್ ನೇತೃತ್ವದಲ್ಲಿ ಮೂವರು ಸದಸ್ಯರ ಎಸ್ಐಟಿ ರಚಿಸಲಾಗಿದೆ. 4 ಸಾವಿರ ಮದರಸಾಗಳಿಗೆ ವಿದೇಶಗಳಿಂದ ದೇಣಿಗೆ, ಭಯೋತ್ಪಾದನೆ ಚಟುವಟಿಕೆಗಳು, ಬಲವಂತವಾಗಿ ಮತಾಂತರ ಮಾಡುವುದು, ಮದರಸಾಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಕೈಗೊಳ್ಳುವುದು ಸೇರಿ ಹಲವು ದಿಸೆಯಲ್ಲಿ ಎಸ್‌ಐಟಿಯು ತನಿಖೆ ನಡೆಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮೋಹಿತ್ ಅಗರ್ವಾಲ್ ನೇತೃತ್ವದ ತಂಡದಲ್ಲಿ ಸೈಬರ್ ಕ್ರೈಂ ಎಸ್‌ಪಿ ಡಾ.ತ್ರಿವೇಣಿ ಸಿಂಗ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕಿ ಜೆ. ರೀಭಾ ಇರಲಿದ್ದಾರೆ. ನೇಪಾಳ ಗಡಿಯಲ್ಲಿರುವ ಮದರಸಾಗಳನ್ನು ಗುರುತಿಸಿ, ಅವುಗಳ ವಿರುದ್ಧ ತನಿಖೆ ನಡೆಸುವ ಕುರಿತು ಅಕ್ಟೋಬರ್ 30ರಂದು ತಂಡವು ಮತ್ತೊಂದು ಸುತ್ತಿನ ಸಭೆ ನಡೆಸಿ ತನಿಖೆ ಆರಂಬಿಸಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹಿಟ್ಲರ್ ಯಹೂದಿಗಳ ಹತ್ಯೆಗೆ ಏಕೆ ಮುಂದಾಗಿದ್ದ ಗೊತ್ತಾಯಲ್ಲ! ಪೋಸ್ಟ್ ಮಾಡಿದ ಉದ್ಯೋಗಿಯ ಜಾಬ್ ಖತಂ
ತಂಡದ ಸದಸ್ಯೆ ಹೇಳುವುದೇನು?
ಎಸ್‌ಐಟಿ ರಚನೆ ಕುರಿತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕಿ ಜೆ. ರೀಭಾ ಮಾಹಿತಿ ನೀಡಿದ್ದಾರೆ. “ವಿದೇಶಗಳಿಂದ ದೇಣಿಗೆ ಸ್ವೀಕರಿಸುವ ಕುರಿತು ತನಿಖೆ ನಡೆಸಲು ಎಸ್‌ಐಟಿ ರಚಿಸಲಾಗಿದೆ. ಇದಕ್ಕಾಗಿ ಮದರಸಾಗಳ ಎಲ್ಲ ದಾಖಲೆ, ಬ್ಯಾಂಕ್ ಖಾತೆ ಪರಿಶೀಲನೆ ಸೇರಿ ಹಲವು ದಿಸೆಯಲ್ಲಿ ತನಿಖೆ ನಡೆಸಲಾಗುತ್ತದೆ” ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ 2022ರಲ್ಲಿಯೇ ಮದರಸಾಗಳ ಸಮೀಕ್ಷೆ ನಡೆಸಲಾಗಿದ್ದು, ನೇಪಾಳ ಗಡಿಯಲ್ಲಿರುವ ಮದರಸಾಗಳಿಗೆ ವಿದೇಶಿ ಹಣ ಹರಿದುಬರುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.