Site icon Vistara News

Jammu and Kashmir : 434 ಕಿ.ಮೀ ಉದ್ದದ ಶ್ರೀನಗರ-ಲೇಹ್‌ ಹೆದ್ದಾರಿ, ದಾಖಲೆಯ 66 ದಿನಗಳಲ್ಲಿ ಸಂಚಾರಕ್ಕೆ ಮುಕ್ತ

Zozila pass

Zozila pass

ಶ್ರೀನಗರ : ಜಮ್ಮು ಕಾಶ್ಮೀರದ ಹಿಮಾವೃತ ಶ್ರೀನಗರ-ಲೇಹ್‌ ಹೆದ್ದಾರಿಯು ( Srinagr-Leh highway ) ದಾಖಲೆಯ 66 ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಿದೆ. ಈ ಹೆದ್ದಾರಿಯು ಲಡಾಕ್‌ ವಲಯವನ್ನು ದೇಶದ ಇತರ ಭಾಗಕ್ಕೆ ಜೋಡಿಸುತ್ತದೆ. ಭಾರಿ ಹಿಮಪಾತದ ಪರಿಣಾಮ ಜನವರಿ 6ರಂದು ಹೆದ್ದಾರಿ ಸಂಚಾರವನ್ನು ಬಂದ್‌ ಮಾಡಲಾಗಿತ್ತು.

ಅಗತ್ಯ ವಸ್ತುಗಳನ್ನು ಹೊತ್ತ ಸರಕು ಸಾಗಣೆ ವಾಹನವು ಗುರು ವಾರ ಲಡಾಕ್‌ಗೆ ಈ ಹೆದ್ದಾರಿಯಲ್ಲಿ ತೆರಳಿತು. ಗಡಿ ರಸ್ತೆ ಸಂಘಟನೆಯ ( Border Roads Organisation) ನಿರ್ದೇಶಕ ಲೆಫ್ಟಿನೆಂಟ್‌ ಜನರಲ್‌ ರಾಜೀವ್‌ ಚೌಧುರಿ ಅವರು ಹಸಿರು ನಿಶಾನೆ ತೋರಿಸಿದರು. ಯೋಜನೆಯ ಮುಖ್ಯ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.

ಶ್ರೀನಗರ-ಕಾರ್ಗಿಲ್-ಲೇಹ್‌ ರಸ್ತೆಯಲ್ಲಿರುವ (Srinagar-Kargil-Leh road) ಝೋಜಿಲಾ ಪಾಸ್‌ ಸಮುದ್ರ ಮಟ್ಟಕ್ಕಿಂತ 11,650 ಅಡಿ ಎತ್ತರದಲ್ಲಿದೆ. ಇದು ಕಾಶ್ಮೀರ ಕಣಿವೆ ಮತ್ತು ಲಡಾಕ್‌ ವಲಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸಾಮಾನ್ಯವಾಗಿ ಈ ಝೋಜಿಲಾ ಪಾಸ್‌ (zozila pass) ಅನ್ನು ಪ್ರತಿ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಮುಚ್ಚಲಾಗುತ್ತದೆ. ಏಪ್ರಿಲ್-ಮೇನಲ್ಲಿ ಮಾತ್ರ ತೆರೆಯಲಾಗುತ್ತದೆ. ವರ್ಷಕ್ಕೆ 5-6 ತಿಂಗಳು ಮುಚ್ಚಲಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಉತ್ತರದ ಗಡಿಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಂಪರ್ಕವನ್ನು ಹೆಚ್ಚಿಸಲಾಗುತ್ತಿದೆ. ಆದ್ದರಿಂದ ಝೋಜಿಲಾ ಪಾಸ್‌ ಅನ್ನು ಸಾಧ್ಯವಿರುವಷ್ಟು ಹೆಚ್ಚಿನ ಅವಧಿಗೆ ತೆರೆಯಬೇಕಾದ ಅಗತ್ಯ ಇತ್ತು. ಹಿಮಪಾತದ ನಡುವೆಯೂ ಬಿಆರ್‌ಒ ರಸ್ತೆಯನ್ನು ಸುಗಮಗೊಳಿಸಿದೆ.

Exit mobile version