ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (G20 Summit) ಅವರು ಯಾವುದೇ ದೇಶಕ್ಕೆ ಪ್ರವಾಸ ಕೈಗೊಳ್ಳಲಿ, ಯಾವುದೇ ಜಾಗತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿ, ಅವರು ಬಿಡುವಿಲ್ಲದ ಭೇಟಿಗಳಲ್ಲಿ, ದ್ವಿಪಕ್ಷೀಯ ಮಾತುಕತೆಗಳಲ್ಲಿ ನಿರತರಾಗಿರುತ್ತಾರೆ. ಈಗ ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಮೋದಿ ಅವರು ಸೋಮವಾರ (ನವೆಂಬರ್ 14) ಇಂಡೋನೇಷ್ಯಾ ಪ್ರವಾಸ ಕೈಗೊಳ್ಳಲಿದ್ದು, ಸಾಲು ಸಾಲು ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಇಂಡೋನೇಷ್ಯಾದಲ್ಲಿ ಜಿ20 ಸಭೆ ನಡೆಯಲಿದ್ದು, ಇದಕ್ಕಾಗಿ ಮೋದಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ನವೆಂಬರ್ 14ರಂದು ಪ್ರವಾಸ ಆರಂಭಿಸುವ ಇವರು, ನವೆಂಬರ್ 16ರಂದು ಹಿಂತಿರುಗಲಿದ್ದಾರೆ. ಪ್ರವಾಸದ 45 ಗಂಟೆಗಳಲ್ಲಿ ಪ್ರಧಾನಿಯವರು ಜಗತ್ತಿನ 10 ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ. ಹಾಗೆಯೇ, 20 ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ, ಕೆಲ ವಿಷಯಗಳ ಕುರಿತು ಮಾತನಾಡಲಿದ್ದಾರೆ.
ಸಭೆಯ ಪ್ರಮುಖ ವಿಷಯಗಳು ಯಾವವು?
ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು ಮುಂದುವರಿಯುತ್ತಿರುವ ವೇಳೆಯೇ ಜಿ20 ಶೃಂಗಸಭೆ ನಡೆಯುತ್ತಿರುವುದು ಹಲವು ದೃಷ್ಟಿಯಿಂದ ಮಹತ್ವ ಪಡೆದಿದೆ. ಜಾಗತಿಕ ಸಮಸ್ಯೆಗಳು, ಆಹಾರ ಹಾಗೂ ಇಂಧನ ಸುರಕ್ಷತೆ, ಆರೋಗ್ಯ, ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ. ಭಾರತ, ರಷ್ಯಾ, ಬ್ರಿಟನ್, ಅಮೆರಿಕ, ಚೀನಾ ಸೇರಿ 20 ರಾಷ್ಟ್ರಗಳು ಒಕ್ಕೂಟದಲ್ಲಿವೆ.
ಭಾರತಕ್ಕೆ ಅಧ್ಯಕ್ಷತೆಯ ಹಸ್ತಾಂತರ
2023ರಲ್ಲಿ ಜಿ20 ಶೃಂಗಸಭೆಯು ಭಾರತದಲ್ಲಿಯೇ ನಡೆಯುವುದರಿಂದ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಅವರು ಸಾಂಕೇತಿಕವಾಗಿ ನರೇಂದ್ರ ಮೋದಿ ಅವರಿಗೆ ಜಿ-20 ಶೃಂಗಸಭೆಯ ಅಧ್ಯಕ್ಷತೆಯನ್ನು (G20 Presidency) ಹಸ್ತಾಂತರಿಸಲಿದ್ದಾರೆ. 17ನೇ ಜಿ20 ಸಭೆಯ ಸಮಾರೋಪದ ವೇಳೆ ಮೋದಿ ಅವರಿಗೆ ಹಸ್ತಾಂತರ ಮಾಡಲಿದ್ದಾರೆ. ಮುಂದಿನ ವರ್ಷದವರೆಗೆ ಭಾರತದ ಅಧ್ಯಕ್ಷತೆಯೇ ಇರಲಿದೆ.
ಇದನ್ನೂ ಓದಿ | G20 Logo India | ನಮ್ಮ ವೈವಿಧ್ಯತೆ, ಸಾಮರ್ಥ್ಯ ಪ್ರದರ್ಶಿಸೋಣ: ಮೋದಿ, ಜಿ20 ಅಧ್ಯಕ್ಷತೆಯ ಲೋಗೋ ಅನಾವರಣ