ಭೋಪಾಲ್: ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯ ಮಧ್ಯೆಯೂ ಬಿಜೆಪಿ ಮತ್ತೆ ಗೆಲುವಿನ ನಗೆ ಬೀರಿದೆ. ಕಳೆದ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದರೂ ಅಧಿಕಾರದಿಂದ ವಂಚಿತರಾದ ಕಾಂಗ್ರೆಸ್‌ಗೆ (Congress) ಈ ಬಾರಿ ಮಧ್ಯಪ್ರದೇಶದಲ್ಲಿ ಗೆಲುವಿನ ವಿಶ್ವಾಸ ಇತ್ತು. ಆದರೆ, ಬಿಜೆಪಿ ಅಲೆ, ಸಂಘಟಿತ ಪ್ರಯತ್ನದ ಮುಂದೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮಂಕಾಗಿದೆ. ಹಾಗಾದರೆ, ಮಧ್ಯಪ್ರದೇಶದಲ್ಲಿ (Madhya Pradesh) ಬಿಜೆಪಿ ಗೆಲುವಿಗೆ ಐದು ಪ್ರಮುಖ (MP Election Result) ಕಾರಣಗಳು ಯಾವವು? ಬಿಜೆಪಿ ಗೆದ್ದಿದ್ದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
1. ಮೋದಿ ಕೇಂದ್ರಿತ ಪ್ರಚಾರ
ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಮಧ್ಯಪ್ರದೇಶ ಬಿಜೆಪಿ ಯಶಸ್ವಿಯಾಗಿದೆ. “ಮೋದಿ ಮನದಲ್ಲಿ ಮಧ್ಯಪ್ರದೇಶ, ಮಧ್ಯಪ್ರದೇಶದ ಮನದಲ್ಲಿ ಮೋದಿ” ಎಂದು ಬಿಜೆಪಿ ಪ್ರಚಾರ ಮಾಡಿತು. ಇನ್ನು ನರೇಂದ್ರ ಮೋದಿ ಅವರು 14 ರ‍್ಯಾಲಿಗಳನ್ನು ನಡೆಸಿ, ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.
2. ಲಾಡ್ಲಿ ಬೆಹ್ನಾ ಯೋಜನೆ
ಮಧ್ಯಪ್ರದೇಶದಲ್ಲಿ ಬಡ ಹೆಣ್ಣುಮಕ್ಕಳಿಗೆ ಮಾಸಿಕ 1 ಸಾವಿರ ರೂ. ಸಹಾಯ ಧನ ನೀಡುವುದೇ ಲಾಡ್ಲಿ ಬೆಹನಾ ಯೋಜನೆಯಾಗಿದೆ. ಕಾಂಗ್ರೆಸ್ ಉಚಿತ ಕೊಡುಗೆಗಳ ಘೋಷಣೆಯನ್ನು ಮೊದಲೇ ಅರಿತಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು 2023ರ ಮಾರ್ಚ್‌ನಲ್ಲಿಯೇ ಲಾಡ್ಲಿ ಬೆಹನಾ ಯೋಜನೆಯನ್ನು ಜಾರಿಗೆ ತಂದರು. ಯೋಜನೆ ಜಾರಿಗೆ ತಂದು, ಬಡ ಹೆಣ್ಣುಮಕ್ಕಳ ಖಾತೆಗಳಿಗೆ ಮಾಸಿಕ 1 ಸಾವಿರ ರೂ. ಜಮೆ ಮಾಡಿಸಿದರು. ಆ ಮೂಲಕ ಸರ್ಕಾರವು ಮಹಿಳೆಯರ ಪರ ಇದೆ ಎಂಬ ಸಂದೇಶ ರವಾನಿಸಿದರು.
3. ಡಬಲ್ ಎಂಜಿನ್ ಸರ್ಕಾರದ ಭರವಸೆ
ಮಧ್ಯಪ್ರದೇಶದಲ್ಲಿ ಡಬಲ್ ಎಂಜಿನ್ ಸರ್ಕಾರವು ಅಭಿವೃದ್ಧಿಗೆ ಕಾರಣವಾಗಿದೆ ಎಂದು ಬಿಜೆಪಿಯು ಪ್ರಚಾರದ ವೇಳೆ ಪ್ರಬಲವಾಗಿ ಜನರಿಗೆ ಮನವರಿಕೆ ಮಾಡಿದ್ದು ಕೂಡ ಗೆಲುವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರದ ಅನುದಾನ, ರಾಜ್ಯ ಸರ್ಕಾರದ ಅಭಿವೃದ್ಧಿ ಪರ ಆಡಳಿತದಿಂದ ಮಧ್ಯಪ್ರದೇಶ ಏಳಿಗೆ ಹೊಂದುತ್ತಿದೆ ಎಂದು ಬಿಜೆಪಿಯು ಪ್ರಚಾರ ಮಾಡಿದ್ದು ಸಹಕಾರಿಯಾಗಿದೆ ಎನ್ನಲಾಗಿದೆ.
4. ಕಾಂಗ್ರೆಸ್ ಪ್ರಚಾರದ ಕೊರತೆ
ಮಧ್ಯಪ್ರದೇಶದಲ್ಲಿ ಬಿಜೆಪಿಯಂತೆ ಉತ್ತಮವಾಗಿ ಪ್ರಚಾರ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಸಾಮಾಜಿಕ ಜಾಲತಾಣಗಳನ್ನೂ ಕಾಂಗ್ರೆಸ್ ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಇನ್ನು ಬಿಜೆಪಿಯಂತೆ ಪ್ರಮುಖ ನಾಯಕರನ್ನು ಕರೆಸಿ ರ‍್ಯಾಲಿಗಳನ್ನು ಆಯೋಜಿಸದೆ ಇರುವುದು, ಕೊನೆಯ ಕ್ಷಣದಲ್ಲ ಪ್ರಚಾರ ಕೈಗೊಂಡಿದ್ದು, ಗ್ಯಾರಂಟಿ ಭರವಸೆಗಳನ್ನು ಜನರಿಗೆ ತಲುಪಿಸುವಲ್ಲಿ ಹಿನ್ನಡೆ ಅನುಭವಿಸಿದ್ದು ಬಿಜೆಪಿಗೆ ವರದಾನವಾಗಿದೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಕಾಂಗ್ರೆಸ್, 3 ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ; ಇಲ್ಲಿವೆ ಫೋಟೊಗಳು
5. ಅಮಿತ್ ಶಾ ಚಾಣಾಕ್ಷತನ
ಮಧ್ಯಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಅಮಿತ್ ಶಾ ರೂಪಿಸಿದ ರಣತಂತ್ರವೂ ಗೆಲುವಿಗೆ ಕಾರಣವಾಗಿದೆ. 2022ರ ಮಧ್ಯ ಭಾಗದಿಂದಲೇ ರಾಜ್ಯದಲ್ಲಿ ಬಿಜೆಪಿಯು ಚುನಾವಣೆ ಸಿದ್ಧತೆ ನಡೆಸಿತು. ಅಮಿತ್ ಶಾ ಅವರು ಮುಖಂಡರು ಹಾಗೂ ಕಾರ್ಯಕರ್ತರ ಜತೆ ಸಭೆ ನಡೆಸಿ ಅವರನ್ನು ಹುರಿದುಂಬಿಸಿದರು. ಪ್ರಚಾರ ಕಾರ್ಯಕ್ಕೆ ಕ್ರಿಯಾಯೋಜನೆ ರೂಪಿಸಿಕೊಟ್ಟರು. ಇದರ ಫಲಿತಾಂಶ ಈಗ ಕಣ್ಣಮುಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ