Site icon Vistara News

Rajya Sabha Members: ಜೈ ಶಂಕರ್, ಡೆರಿಕ್ ಸೇರಿ 11 ಸದಸ್ಯರು ರಾಜ್ಯಸಭೆಗೆ ಅವಿರೋಧ ಆಯ್ಕೆ?

S Jaishankar and Derek

ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್(S Jaishankar), ತೃಣಮೂಲ ಕಾಂಗ್ರೆಸ್ (TMC) ನಾಯಕ ಡೆರೆಕ್ ಓ ಬ್ರಿಯಾನ್ (Derek O’Brien) ಸೇರಿದಂತೆ 11 ಅಭ್ಯರ್ಥಿಗಳು ಅವಿರೋಧವಾಗಿ (unopposed election) ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ(Rajya Sabha Members). ಆಡಳಿತಾರೂಢ ಬಿಜೆಪಿಗೆ (BJP) ಈ ಬಾರಿ ಹೆಚ್ಚು ಲಾಭವಾಗಲಿದ್ದು, ರಾಜ್ಯಸಭೆಯಲ್ಲಿ ಅದರ ಬಲ 93ಕ್ಕೆ ಏರಿಕೆಯಾಗಲಿದೆ. ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಬಹುಮತವಿಲ್ಲ(Rajya Sabha Election).

ರಾಜ್ಯಸಭೆ ಚುನಾವಣೆಯು ಜುಲೈ 24ರಂದು ನಡೆಯಲಿದೆ. ನಾಮ ಪತ್ರ ವಾಪಸ್ ಪಡೆಯಲು ಜುಲೈ 17 ಕೊನೆಯ ದಿನವಾಗಿತ್ತು. ಆದರೆ, ಪ್ರತಿಪಕ್ಷದ ಯಾವುದೇ ಅಭ್ಯರ್ಥಿಗಳು ನಾಮಪತ್ರ ಹಾಕಿಲ್ಲವಾದ್ದರಿಂದ ಈ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಹಾಗಾಗಿ ಜುಲೈ 24ರಂದು ಎಲೆಕ್ಷನ್ ನಡೆಯುವುದು ಡೌಟು.

ತೃಣಮೂಲ ಕಾಂಗ್ರೆಸ್ ಪಕ್ಷದಿಂದ 6 ಹಾಗೂ ಬಿಜೆಪಿಯಿಂದ 5 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಸಭೆಯ ಒಂದು ಉಪ ಚುನಾವಣೆ ಸೀಟು ತೃಣಮೂಲ ಪಾಲಾಗಲಿದೆ.

ವಿದೇಶಾಂಗ ಸಚಿವರಾಗಿರುವ ಎಸ್ ಜೈಶಂಕರ್ ಅವರು ಎರಡನೇ ಬಾರಿಗೆ ರಾಜ್ಯಸಭೆಗೆ ಪ್ರವೇಶ ಪಡೆಯಲು ಮುಂದಾಗಿದ್ದಾರೆ. ಎಸ್ ಜೈ ಶಂಕರ್ ಜತೆ ಬಾಬುಭಾಯಿ ದೇಸಾಯಿ, ಕೇಸರಿದೇವ್ ಸಿಂಗ್ ಝಾಲಾ ಅವರೂ ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ. ಹಾಗೆಯೇ, ಬಿಜೆಪಿ ಅಭ್ಯರ್ಥಿಗಳಾದ ಅನಂತ್ ಮಹಾರಾಜ ಅವರು ಪಶ್ಚಿಮ ಬಂಗಾಳ, ಸದಾನಂದ ಶೇಟ್ ತನವಾಡೆ ಅವರು ಗೋವಾದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದಾರೆ.

ತೃಣಮೂಲದಿಂದ ಡೆರೆಕ್ ಓ ಬ್ರಿಯಾನ್ ಮಾತ್ರವಲ್ಲದೇ, ಸುಖೇಂದು ಶೇಖರ್ ರಾಯ್, ಡೋಲಾ ಸೇನ್, ಸಾಕೇತ್ ಗೋಖಲೆ, ಸಮಿರುಲ್ ಇಸ್ಲಾಮ್ ಮತ್ತು ಪ್ರಕಾಶ್ ಬಾರಿಕ್ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಾರೆ. ಇನ್ನು ಕಾಂಗ್ರೆಸ್ ಒಂದು ಸ್ಥಾನವನ್ನು ಕಳೆದುಕೊಂಡು 30 ಸ್ಥಾನಗಳಿಗೆ ಇಳಿಯಲಿದೆ.

ಈ ಸುದ್ದಿಯನ್ನೂ ಓದಿ: ರಾಜ್ಯಸಭೆ ಚುನಾವಣೆ | ಮಹಾರಾಷ್ಟ್ರ, ಕರ್ನಾಟಕದಲ್ಲಿ ಗೆದ್ದು ಬೀಗಿದ ಬಿಜೆಪಿ, ಠಾಕ್ರೆ ಪಾಳೆಯಕ್ಕೆ ಮುಖಭಂಗ

245 ಸದಸ್ಯರನ್ನು ಹೊಂದಿರುವ ರಾಜ್ಯಸಭೆಯಲ್ಲಿ ಜುಲೈ 24ಕ್ಕೆ 7 ಸೀಟುಗಳು ಖಾಲಿಯಾಗಲಿವೆ. ಜಮ್ಮು ಮತ್ತು ಕಾಶ್ಮೀರದಿಂದ ನಾಲ್ಕು, ಉತ್ತರ ಪ್ರದೇಶದಿಂದ ಒಬ್ಬರು ಮತ್ತು ಇಬ್ಬರು ನಾಮನಿರ್ದೇಶನ ಸದಸ್ಯರು ನಿವೃತ್ತರಾಗಲಿದ್ದಾರೆ. ಹಾಗಾಗಿ, ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ 238ಕ್ಕೆ ಇಳಿಕೆಯಾಗಲಿದ್ದು, ಬಹುಮತ 120 ಸೀಟು ಬೇಕು. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಒಟ್ಟು 105 ಸದಸ್ಯರನ್ನು ಹೊಂದಿವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version