ನವ ದೆಹಲಿ: ಕಾಂಗ್ರೆಸ್ಗೆ ಒಂದರ ಬೆನ್ನಿಗೆ ಒಂದರಂತೆ ಹಿನ್ನಡೆಯಾಗುತ್ತಿದೆ. ಗುಲಾಂ ನಬಿ ಆಜಾದ್ ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಜಮ್ಮು-ಕಾಶ್ಮೀರದ ಕಾಂಗ್ರೆಸ್ನ ಒಟ್ಟು ಐದು ಮಂದಿ ಪ್ರಮುಖ ನಾಯಕರು/ಮಾಜಿ ಶಾಸಕರು ಪಕ್ಷವನ್ನು ತೊರೆದಿದ್ದಾರೆ. ತಾವು ಗುಲಾಂ ನಬಿ ಆಜಾದ್ಗೆ ಬೆಂಬಲ ವ್ಯಕ್ತಪಡಿಸಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಗುಲಾಂ ಮೊಹಮ್ಮದ್ ಸರೋರಿ, ಹಾಜಿ ಅಬ್ದುಲ್ ರಷೀದ್, ಮೊಹಮ್ಮದ್ ಅಮೀನ್ ಭಟ್, ಗುಲ್ಜಾರ್ ಅಹ್ಮದ್ ವಾನಿ, ಚೌಧರಿ ಅಕ್ರಮ್ ಮೊಹಮ್ಮದ್ ಮತ್ತು ಸಲ್ಮಾನ್ ನಿಜಾಮಿ ಎಂಬುವರು ರಾಜೀನಾಮೆ ಕೊಟ್ಟಿದ್ದು, ಅವರೆಲ್ಲ ಜಮ್ಮು-ಕಾಶ್ಮೀರದ ಕಾಂಗ್ರೆಸ್ನಲ್ಲಿ ಪ್ರಮುಖರೇ ಆಗಿದ್ದರು.
ಹಲವು ವರ್ಷಗಳಿಂದಲೂ ಕಾಂಗ್ರೆಸ್ನಿಂದ ರೆಬಲ್ ಆಗಿದ್ದ ಜಿ 23 ಗುಂಪಿನ ಪ್ರಮುಖ ನಾಯಕ ಗುಲಾಂ ನಬಿ ಆಜಾದ್ ಅಂತಿಮವಾಗಿ ಇಂದು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ‘ರಾಹುಲ್ ಗಾಂಧಿ ಬಾಲಿಶತನ , ಅಪ್ರಬುದ್ಧತೆಯಿಂದ ಇಡೀ ಪಕ್ಷ ಹಾಳಾಯಿತು. ಆಂತರಿಕ ಚುನಾವಣೆಯಲ್ಲಿ ವಂಚನೆಗಳಾದವು. ಪಕ್ಷದಲ್ಲಿ ಹಿರಿಯರು, ಅನುಭವಿಗಳೆಲ್ಲ ನಿರ್ಲಕ್ಷ್ಯಕ್ಕೆ ಒಳಗಾದರು’ ಎಂದು ಬರೆದಿದ್ದಾರೆ.
ಕಾಂಗ್ರೆಸ್ ಬಿಟ್ಟಿರುವ ಗುಲಾಂ ನಬಿ ಆಜಾದ್ ತಾವು ಯಾವುದೇ ಪಕ್ಷಕ್ಕೂ ಸೇರುತ್ತಿಲ್ಲ. ಬದಲಾಗಿ ಜಮ್ಮು-ಕಾಶ್ಮೀರದಲ್ಲಿ ಹೊಸ ರಾಜಕೀಯ ಪಕ್ಷವನ್ನು ಕಟ್ಟುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಅಲ್ಲಿನ ಐವರು ಗುಲಾಂ ನಬಿ ಆಜಾದ್ಗೆ ಬೆಂಬಲ ಸೂಚಿಸಿ ರಾಜೀನಾಮೆ ಕೊಟ್ಟಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ನ ಹಲವು ನಾಯಕರು ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರೆಲ್ಲರಿಗಿಂತ ಗುಲಾಂ ನಬಿ ಆಜಾದ್ ರಾಜೀನಾಮೆ ಕಾಂಗ್ರೆಸ್ಗೆ ದೊಡ್ಡ ಪೆಟ್ಟು ಎಂದೇ ಹೇಳಬಹುದು.
ಇದನ್ನೂ ಓದಿ: Ghulam Nabi Azad | ಕಾಂಗ್ರೆಸ್ ಬಿಟ್ಟು ಜಮ್ಮು ಕಾಶ್ಮೀರಕ್ಕೆ ಹೊರಟ ಆಜಾದ್; ಹೊಸ ಪಕ್ಷ ರಚನೆಯ ಘೋಷಣೆ