ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಯ (Gujarat Election) ಮೊದಲ ಹಂತದಲ್ಲಿ ಶೇ.೬೩ರಷ್ಟು ಮತದಾನ ದಾಖಲಾಗಿದ್ದು, ೮೯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಆದರೆ, ೨೦೧೭ರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ಪ್ರಮಾಣಕ್ಕೆ ಹೋಲಿಸಿದರೆ ಈ ಬಾರಿ ಶೇ.೫ರಷ್ಟು ಮತದಾನ ಕುಸಿತವಾಗಿದೆ. ಕಳೆದ ಬಾರಿ ಮೊದಲ ಹಂತದಲ್ಲಿ ಶೇ.೬೮ರಷ್ಟು ಮತದಾನ ದಾಖಲಾಗಿತ್ತು. ಹಾಗಾದರೆ ಈ ಬಾರಿ ಮತದಾನ ಪ್ರಮಾಣದ ಕುಸಿತಕ್ಕೆ ಕಾರಣವೇನು? ಚುನಾವಣೆ, ರಾಜಕೀಯ ವಿಶ್ಲೇಷಕರು ನೀಡಿದ ಅಂಶಗಳೇನು ಎಂಬುದರ ಕಿರು ಮಾಹಿತಿ ಇಲ್ಲಿದೆ.
೧. ಡಿಸೆಂಬರ್ ೧ ಗುರುವಾರ ಆಗಿತ್ತು. ಇದು ಕೆಲಸದ ದಿನವಾದ್ದರಿಂದ ಮತದಾನ ಪ್ರಮಾಣ ಕುಂಠಿತವಾಗಿದೆ. ಭಾನುವಾರ ಮತದಾನ ನಡೆದಿದ್ದರೆ ಹೆಚ್ಚಿನ ಜನ ಮತ ಚಲಾಯಿಸುತ್ತಿದ್ದರು ಎಂದು ವಿಶ್ಲೇಷಿಸಲಾಗಿದೆ.
೨. ಆಡಳಿತಾರೂಢ ಬಿಜೆಪಿ ವಿರುದ್ಧ ಅಲೆ ಇದೆ. ಬಿಜೆಪಿ ಸರ್ಕಾರದ ಮೇಲಿನ ಆಕ್ರೋಶಕ್ಕಾಗಿ ಜನ ಮತದಾನ ಮಾಡಿಲ್ಲ ಎಂಬುದು ಕಾಂಗ್ರೆಸ್ ನಾಯಕರ ಅಂಬೋಣವಾಗಿದೆ.
೩. ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರದ ಬಗ್ಗೆ ಜನರಿಗೆ ಸಂತೃಪ್ತಿಯಿದೆ. ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸದಿಂದ ಹೆಚ್ಚಿನ ಜನ ಮತದಾನ ಮಾಡಿಲ್ಲ ಎಂಬುದು ಬಿಜೆಪಿ ನಾಯಕರ ಪ್ರತಿಷ್ಠೆಯ ಮಾತಾಗಿದೆ.
೪. ಚುನಾವಣೆ ಪ್ರಚಾರದ ಕೊರತೆಯೂ ಹಕ್ಕು ಚಲಾವಣೆ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾಲು ಸಾಲು ರ‍್ಯಾಲಿ ನಡೆಸಿದರೂ, ಕಾಂಗ್ರೆಸ್ ಹೆಚ್ಚಿನ ಪ್ರಚಾರ ಮಾಡಲಿಲ್ಲ.
ಇದನ್ನೂ ಓದಿ | Modi Mega Roadshow | ಗುಜರಾತ್ ರೋಡ್ ಶೋ ವೇಳೆ ಕಾರು ನಿಲ್ಲಿಸಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಮೋದಿ