Site icon Vistara News

Medical Students: ಸಮುದ್ರದಲ್ಲಿ ಮುಳುಗಿ 5 ಮೆಡಿಕಲ್‌ ವಿದ್ಯಾರ್ಥಿಗಳ ಸಾವು!

Medical Students

5 Medical Students, Attending A Wedding, Drown In Sea Off Kanniyakumari Coast

ಚೆನ್ನೈ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ (Kanniyakumari) ಸಮುದ್ರದಲ್ಲಿ ಮುಳುಗಿ ಐವರು ಮೆಡಿಕಲ್‌ ವಿದ್ಯಾರ್ಥಿಗಳು (Medical Students) ಮೃತಪಟ್ಟಿದ್ದಾರೆ. ಮದುವೆ ಸಮಾರಂಭಕ್ಕೆಂದು ಐವರು ವಿದ್ಯಾರ್ಥಿಗಳು ತೆರಳಿದ್ದರು. ಇದೇ ವೇಳೆ, ಲೆಮುರ್‌ ಬೀಚ್‌ನಲ್ಲಿ (Lemur Beach) ಈಜಾಡುವಾಗ ಐವರೂ ನೀರುಪಾಲಾಗಿದ್ದಾರೆ. ಐವರಲ್ಲಿ ಇಬ್ಬರು ಯುವತಿಯರಿದ್ದರು ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಐವರೂ ತಿರುಚಿರಪಳ್ಳಿಯಲ್ಲಿರುವ ಎಸ್‌ಆರ್‌ಎಂ ಮೆಡಿಕಲ್‌ ಕಾಲೇಜಿನವರು ಎಂದು ಮಾಹಿತಿ ಲಭ್ಯವಾಗಿದೆ.

ಮೃತರನ್ನು ತಂಜಾವೂರಿನ ಚಾರುಕವಿ, ನೇಯ್‌ವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್‌, ದಿಂಡಿಗಲ್‌ನ ಪ್ರವೀಣ್‌ ಸ್ಯಾಮ್‌ ಹಾಗೂ ಆಂಧ್ರಪ್ರದೇಶದ ವೆಂಕಟೇಶ್‌ ಎಂಬುದಾಗಿ ಗುರುತಿಸಲಾಗಿದೆ. ಒಟ್ಟು ಎಂಟು ವಿದ್ಯಾರ್ಥಿಗಳು ಈಜಾಡಲು ಹೋಗಿದ್ದಾಗ ಐವರು ನೀರುಪಾಲಾಗಿದ್ದಾರೆ. ಇಂಟರ್ನ್‌ಗಳಾಗಿದ್ದ ಕರೂರಿನ ನೇಶಿ, ಥೆಂಗಿಯ ಪ್ರಿಯಾಂಕಾ ಹಾಗೂ ಮದುರೈನ ಶರಣ್ಯ ಎಂಬ ಯುವತಿಯರನ್ನು ರಕ್ಷಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರವೇಶ ನಿರಾಕರಿಸಲಾಗಿತ್ತು

“ಲೆಮುರ್‌ ಬೀಚ್‌ ಖಾಸಗಿ ಬೀಚ್‌ ಆಗಿದ್ದು, ಇಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಭಾನುವಾರ (ಮೇ 5) ಮದುವೆಗೆ ಬಂದಿದ್ದ ವಿದ್ಯಾರ್ಥಿಗಳು ಅವರಲ್ಲೇ ಗುಂಪುಗಳಾಗಿ ಚದುರಿ ಹೋಗಿದ್ದಾರೆ. ಗೆಳೆಯರು ಸೇರಿ ಪ್ರವಾಸಿ ತಾಣಗಳಿಗೆ ಹೆಸರಾದ ಕನ್ಯಾಕುಮಾರಿಯನ್ನು ಸುತ್ತಲು ಮುಂದಾಗಿದ್ದಾರೆ. ಇವರಲ್ಲಿ ಎಂಟು ವಿದ್ಯಾರ್ಥಿಗಳು ಲೆಮುರ್‌ ಬೀಚ್‌ ಪ್ರವೇಶಿಸಿದ್ದಾರೆ. ಸಮುದ್ರದಲ್ಲಿ ಭಾರಿ ಅಲೆಗಳಿರುವ ಕಾರಣ ಪ್ರವೇಶ ನಿರಾಕರಿಸಲಾಗಿತ್ತು. ಹೀಗಿದ್ದರೂ ಅವರು ಹೇಗೆ ಹೋದರು ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ಕನ್ಯಾಕುಮಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇ. ಸುಂದರವದನಂ ಮಾಹಿತಿ ನೀಡಿದ್ದಾರೆ.

ಕೆಲವೇ ತಿಂಗಳಲ್ಲಿ ಕೋರ್ಸ್‌ ಮುಗಿಯುವುದಿತ್ತು

ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳ ಕೋರ್ಸ್‌ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯುವುದಿತ್ತು. ಎಲ್ಲರೂ ವೈದ್ಯರಾಗುವ ಕನಸು ಕಾಣುತ್ತಿದ್ದರು. ಯಾವ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್‌ ಮಾಡಬೇಕು, ಯಾವ ನಗರಕ್ಕೆ ಹೋದರೆ ಸೂಕ್ತ ಎಂಬ ಕುರಿತು ಅವರ ಮಧ್ಯೆಯೇ ಚರ್ಚೆ ನಡೆಯುತ್ತಿತ್ತು. ಅವರ ಪೋಷಕರು ಕೂಡ ನೂರಾರು ಕನಸು ಕಂಡಿದ್ದರು. ಆದರೆ, ಮದುವೆಗೆ ಹೋದವರು, ಮದುವೆ ಮುಗಿಸಿ, ಖಾಸಗಿ ಬೀಚ್‌ನಲ್ಲಿ ಪ್ರವೇಶ ಇಲ್ಲದಿದ್ದರೂ ಈಜಲು ಹೋಗಿದ್ದೇ ಅವರ ಪ್ರಾಣಕ್ಕೆ ಕುತ್ತು ತಂದಿದೆ.

ಇದನ್ನೂ ಓದಿ: Drowned In water : ತಾಯಿ- ಮಗಳು ಸೇರಿ ನಾಲ್ವರು ನೀರುಪಾಲು

Exit mobile version