ಶ್ರೀನಗರ: ಕಾಂಗ್ರೆಸ್ ಬಿಟ್ಟು ಹೋಗಿ, ಜಮ್ಮು-ಕಾಶ್ಮೀರದಲ್ಲಿ ಹೊಸ ರಾಜಕೀಯ ಪಕ್ಷವನ್ನು ಕಟ್ಟಲು ಮುಂದಾಗಿರುವ ಗುಲಾಂ ನಬಿ ಆಜಾದ್ಗೆ ಭರ್ಜರಿ ಸಪೋರ್ಟ್ ಸಿಗುತ್ತಿದೆ. ಅವರಿಗೆ ಬೆಂಬಲ ನೀಡುವ ಸಲುವಾಗಿ ಜಮ್ಮು-ಕಾಶ್ಮೀರ ಕಾಂಗ್ರೆಸ್ನ ನಾಯಕರು, ಪ್ರಮುಖರು ಒಬ್ಬರ ನಂತರ ಒಬ್ಬರು ರಾಜೀನಾಮೆ ನೀಡುತ್ತಿದ್ದಾರೆ. ಇಂದು ಜಮ್ಮು-ಕಾಶ್ಮೀರ ಕಾಂಗ್ರೆಸ್ನ 51 ಪ್ರಮುಖರು ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ಕಾಂಗ್ರೆಸ್ಗೆ ದೊಡ್ಡಮಟ್ಟದ ಹಿನ್ನಡೆ ಕೊಟ್ಟಿದೆ.
ಹೀಗೆ ಇಂದು ರಿಸೈನ್ ಮಾಡಿದ ಪ್ರಮುಖರಲ್ಲಿ ಜಮ್ಮು-ಕಾಶ್ಮೀರ ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್ ಕೂಡ ಸೇರಿದ್ದಾರೆ. ಇವರನ್ನು ಹೊರತುಪಡಿಸಿ ಮಾಜಿ ಸಚಿವರುಗಳಾದ ಮಜೀದ್ ವಾನಿ, ಡಾ. ಮನೋಹರ್ ಲಾಲ್ ಶರ್ಮಾ, ಚೌಧರಿ ಘಾರು ರಾಮ್, ಮಾಜಿ ಶಾಸಕರಾದ ಠಾಕೂರ್ ಬಲ್ವಾನ್ ಸಿಂಗ್, ಮಾಜಿ ಪ್ರಧಾನ ಕಾರ್ಯದರ್ಶಿ ವಿನೋದ್ ಮಿಶ್ರಾರಂಥ ಪ್ರಮುಖ ನಾಯಕರೂ ಪಕ್ಷ ತೊರೆದಿದ್ದಾರೆ.
ಕಾಂಗ್ರೆಸ್ನ ಈ 51 ಪ್ರಮುಖರು ತಮ್ಮ ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿಗೆ ಸಲ್ಲಿಸಿದ್ದಾರೆ. ಹಾಗೇ, ಇವರೆಲ್ಲರೂ ಗುಲಾಂ ನಬಿ ಆಜಾದ್ ಕಟ್ಟಲಿರುವ ರಾಜಕೀಯ ಪಕ್ಷಕ್ಕೇ ಸೇರ್ಪಡೆಯಾಗುವುದಾಗಿಯೂ ಹೇಳಿಕೊಂಡಿದ್ದಾರೆ. ಅಲ್ಲಿಗೆ ಗುಲಾಂ ನಬಿ ಆಜಾದ್ ಬಿಟ್ಟ ಮೇಲೆ ಇಲ್ಲಿಯವರೆಗೆ 64 ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟಂತಾಗಿದೆ.
ಇದನ್ನೂ ಓದಿ: Congress Crisis | ಅಧಿಕಾರ ಇದ್ದಾಗ ಮುಖಂಡರಿಗೆ ಕಾಂಗ್ರೆಸ್ ಅಂದರೆ ಭೂಷಣ, ಈಗ ಪಲಾಯನ!