ನವ ದೆಹಲಿ : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮತ್ತೆ ಬಹುಮತ ಗಿಟ್ಟಿಸುವುದು ಖಾತರಿಯಾಗಿದೆ. ಇಂಡಿಯಾ ಟುಡೆ ನಡೆಸಿರುವ ಮೂಡ್ ಆಫ್ ನೇಷನ್ (Mood of the Nation) ಸಮೀಕ್ಷೆಯಲ್ಲಿ ಒಟ್ಟು ಶೇಕಡಾ 52 ಮತದಾರರು ಮೋದಿ ಅವರೇ ಮತ್ತೆ ಪ್ರಧಾನಿಯಾಗುವುದನ್ನು ಬಯಸಿದ್ದಾರೆ. ಈ ಮೂಲಕ ಶೇಕಡಾ 50ಕ್ಕಿಂತ ಅಧಿಕ ಜನ ಬೆಂಬಲ ಗಳಿಸುವ ಮುನ್ಸೂಚನೆ ಕೊಟ್ಟಿದ್ದಾರೆ. ಸಮೀಕ್ಷೆಯ ಪ್ರಕಾರ ಶೇಕಡಾ 14ರಷ್ಟು ಮಂದಿ ರಾಹುಲ್ಗಾಂಧಿ ಮುಂದಿನ ಪ್ರಧಾನಿಯಾಗುವುದನ್ನು (prime minister) ಬಯಸಿದ್ದಾರೆ.
ಪ್ರಧಾನಿ ಬಳಿಕ ಬಿಜೆಪಿಯಲ್ಲಿ ಯಾರು ಉತ್ತಮ ಎಂಬ ಇಂಡಿಯಾ ಟುಡೆ ಪ್ರಶ್ನೆಗೆ ಶೇಕಡಾ 26ರಷ್ಟು ಮಂದಿ ಗೃಹಮಂತ್ರಿ ಅಮಿತ್ ಶಾ ಅವರ ಹೆಸರನ್ನು ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಿಎಂ ಆಗಬೇಕು ಎಂದು ಶೇಕಡಾ 25ರಷ್ಟು ಮಂದಿ ಹೇಳಿದ್ದಾರೆ. ಕೇಂದ್ರ ಸಾರಿಗೆ ಸಚಿವ ಗಡ್ಕರಿ ಪರವಾಗಿಯೂ ಶೇಕಡಾ 14ರಷ್ಟು ಮತಗಳು ಬಿದ್ದಿವೆ.
ಇದನ್ನೂ ಓದಿ : Republic Day 2023: ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟು, ಹುತಾತ್ಮ ಯೋಧರಿಗೆ ನಮಿಸಿದ ಪ್ರಧಾನಿ ಮೋದಿ
ಒಂದು ವೇಳೆ ತಕ್ಷಣದಲ್ಲೇ ಲೋಕ ಸಭಾ ಚುನಾವಣೆ ನಡೆದರೂ ಬಿಜೆಪಿ ನೇತೃತ್ವದ ಎನ್ಡಿಎ 298 ಸೀಟ್ಗಳನ್ನು ಸಲೀಸಾಗಿ ಪಡೆಯಲಿದೆ. ಇದರ ಪ್ರಮಾಣ ಶೇಕಡಾ 43. ರಾಹುಲ್ ನೇತೃತ್ವದ ಕಾಂಗ್ರೆಸ್ 153 ಸ್ಥಾನಗಳನ್ನು ಅಂದರೆ ಶೇ30ರಷ್ಟು ಮತಗಳಿಕೆ ಮಾಡಲಿದೆ ಎಂದು ಇಂಡಿಯಾ ಟುಡೆ ಹೇಳಿದೆ. ಉಳಿದ ಪಕ್ಷಗಳು ಶೇಕಡಾ 27 ಅಂದರೆ ಒಟ್ಟಾರೆ 92 ಸೀಟ್ಗಳನ್ನು ಗಳಿಸಿಕೊಳ್ಳಲಿವೆ.
ಚೀನಾದ ಗಡಿ ತಂಟೆ ಹಾಗೂ ಆರ್ಥಿಕ ಬಿಕ್ಕಟ್ಟಿನ ಸೂಚನೆಯ ನಡುವೆಯೂ ಮೋದಿ ನೇತೃತ್ವದ ಎನ್ಡಿಎ ಸರಕಾರದ ಬಗ್ಗೆ ಜನ ಮೆಚ್ಚುಗೆ ತೋರಿಸಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 67ರಷ್ಟು ಮಂದಿಗೆ ಮೋದಿಯ ಆಡಳಿತ ಖುಷಿ ಕೊಟ್ಟಿದೆ ಎಂದು ಸಮೀಕ್ಷೆ ಹೇಳಿದೆ.