ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ನಲ್ಲಿ ಭಿನ್ನ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ತೆರವುಗೊಳಿಸಲು ಪಣ ತೊಟ್ಟಿ ನಿಂತಿರುವ ಜಿ-23 ಗುಂಪಿನಲ್ಲಿ ಗುರುತಿಸಿಕೊಂಡಿರುವ ನಾಯಕರನ್ನು ಖುದ್ದು ಭೇಟಿ ಮಾಡಿ ಸಂಧಾನ ನಡೆಸಲು ವರಿಷ್ಠರು ಹೆಣಗಾಡುತ್ತಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಧಾನದ ಬೆನ್ನಲ್ಲೇ ಇದೀಗ ಖುದ್ದು ಸೋನಿಯಾ ಗಾಂಧಿ ಅವರೇ ಅತೃಪ್ತ ನಾಯಕರ ಮನವೊಲಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಅಜಾದ್ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ಸಂಜೆ ಗುಲಾಂ ನಬಿ ಅಜಾದ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದ ಜಿ-23 ಗುಂಪಿನ ನಾಯಕರು ವರಿಷ್ಠರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಗಾಂಧಿ ಕುಟುಂಬದ ಆಪ್ತರನ್ನು ಹೊರತುಪಡಿಸಿ ಪಕ್ಷಕ್ಕಾಗಿ ದುಡಿಯುತ್ತಿರುವ ಯುವಕರಿಗೆ ಅವಕಾಶ ನೀಡಬೇಕು ಎಂಬ ನಿರ್ಣಯವನ್ನು ಅತೃಪ್ತ ನಾಯಕರು ತೆಗೆದುಕೊಂಡಿದ್ದರು.
ಇದರ ಬೆನ್ನಲ್ಲೇ ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಅಜಾದ್ ಭೇಟಿಗೆ ಮುಂದಾಗಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಧಾನಕ್ಕೆ ಯತ್ನಿಸುತ್ತಿದ್ದಾರೆ.