Site icon Vistara News

INDIA Bloc: ಕದನ, ಬಿಕ್ಕಟ್ಟೇ ಎಲ್ಲ; ಚುನಾವಣೆಗೆ ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಇಲ್ಲ

INDIA Alliance

53 days on, INDIA Bloc yet to decide on seat sharing

ನವದೆಹಲಿ: 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ (Lok Sabha Election 2024) ರಣಾಂಗಣ ಸಿದ್ಧವಾಗುತ್ತಿದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ, ನರೇಂದ್ರ ಮೋದಿ (Narendra Modi) ಅವರ ವರ್ಚಸ್ಸು, ಎನ್‌ಡಿಎ ಮೈತ್ರಿಕೂಟದ ಒಗ್ಗಟ್ಟು ಸೇರಿ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಆದರೆ, ಶತಾಯ ಗತಾಯ ಬಿಜೆಪಿಯನ್ನು ಸೋಲಿಸಬೇಕು ಎಂಬ ದೃಷ್ಟಿಯಿಂದ 26 ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟದಲ್ಲಿ (INDIA Bloc) ಬಿಕ್ಕಟ್ಟು, ಗೊಂದಲ, ಒಮ್ಮತದ ಅಭಿಪ್ರಾಯದ ಕೊರತೆಯಿಂದಾಗಿ ಇದುವರೆಗೆ ಸೀಟು ಹಂಚಿಕೆಯ ಬಗ್ಗೆಯೇ ತೀರ್ಮಾನವಾಗಿಲ್ಲ.

ಹೌದು, ಆಗಸ್ಟ್‌ 31 ಹಾಗೂ ಸೆಪ್ಟೆಂಬರ್‌ 1ರಂದು ಮುಂಬೈನಲ್ಲಿ ನಡೆದ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಸೀಟು ಹಂಚಿಕೆ ತೀರ್ಮಾನದ ಕುರಿತು ಚರ್ಚಿಸಲಾಗಿತ್ತು. “ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯಾ ರಾಜ್ಯಗಳಲ್ಲಿ ಕ್ಷಿಪ್ರವಾಗಿ ಸೀಟು ಹಂಚಿಕೆ ಕುರಿತು ತೀರ್ಮಾನವಾಗಬೇಕು” ಎಂಬುದಾಗಿ ತೆಗೆದುಕೊಂಡ ನಿರ್ಣಯವು ನನೆಗುದಿಗೆ ಬಿದ್ದಿದೆ. ಸಭೆ ನಡೆದು 53 ದಿನ ಕಳೆದರೂ ಇದುವರೆಗೆ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಕುರಿತು ಅಂತಿಮ ತೀರ್ಮಾನ ಆಗಿಲ್ಲ. ಇದು ಇಂಡಿಯಾ ಒಕ್ಕೂಟದಲ್ಲಿ ಬಿಕ್ಕಟ್ಟು ಮೂಡಿರುವುದಕ್ಕೆ ಸಾಕ್ಷಿ ಎಂದೇ ಹೇಳಲಾಗುತ್ತಿದೆ.

India bloc Leaders

ವಿಳಂಬ ಆಗುತ್ತಿರುವುದು ಏಕೆ?

ಇಂಡಿಯಾ ಒಕ್ಕೂಟದ ಪಕ್ಷಗಳಲ್ಲಿ ಸೀಟು ಹಂಚಿಕೆ ಕುರಿತು ಒಮ್ಮತದ ಅಭಿಪ್ರಾಯ ಮೂಡದಿರುವುದೇ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಮತ್ತೊಂದೆಡೆ, ಬೃಹತ್‌ ಪ್ರತಿಪಕ್ಷವಾದ ಕಾಂಗ್ರೆಸ್‌ ವಿಧಾನಸಭೆ ಚುನಾವಣೆಗಳ ಫಲಿತಾಂಶಕ್ಕಾಗಿ ಕಾಯುತ್ತಿದೆ. ಫಲಿತಾಂಶ ಬಂದ ಬಳಿಕ ಸೀಟು ಹಂಚಿಕೆ ಮಾಡಲು ಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದರೆ ಹೆಚ್ಚಿನ ಸೀಟು ಸಿಗುತ್ತವೆ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರವಾಗಿದೆ. ಆದರೆ, ಇದರ ಕುರಿತು ಇಂಡಿಯಾ ಒಕ್ಕೂಟದಲ್ಲಿ ಅಸಮಾಧಾನ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಹುಲ್‌ ಗಾಂಧಿಯನ್ನು ‘ಮಂಕುದಿಣ್ಣೆ’ ಎಂದ ಎಸ್‌ಪಿ ನಾಯಕ; ‘ಇಂಡಿಯಾ’ದಲ್ಲಿ ಬಿಕ್ಕಟ್ಟು ಕಂಡೆಯಾ!

ಮಧ್ಯಪ್ರದೇಶದಲ್ಲಿ ಎಸ್‌ಪಿ ಜತೆ ಕಾಂಗ್ರೆಸ್‌ ಬಿಕ್ಕಟ್ಟು

ಮಧ್ಯಪ್ರದೇಶದಲ್ಲಿ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷದ ಮಧ್ಯೆ ಬಿರುಕು ಮೂಡಿದೆ. ಇಂಡಿಯಾ ಒಕ್ಕೂಟ ರಾಷ್ಟ್ರ ಮಟ್ಟದಲ್ಲಿ ಮಾತ್ರ ಎಂದೂ, ಮಧ್ಯಪ್ರದೇಶದಲ್ಲಿ ಸೀಟು ಹಂಚಿಕೆ ಇಲ್ಲವೆಂದೂ ಈಗಾಗಲೇ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ತಿಳಿಸಿದ್ದಾರೆ. ಅತ್ತ ಕಾಂಗ್ರೆಸ್‌ ಕೂಡ ಮೊಂಡುತನ ಪ್ರದರ್ಶಿಸುತ್ತಿದೆ. ಇದು ಕೂಡ ಸೀಟು ಹಂಚಿಕೆ ಕುರಿತು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲು ಅಡ್ಡಿಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಷ್ಟೇ ಅಲ್ಲ, ನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ ಹೇಳಿಕೆ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಇಂಡಿಯಾ ಒಕ್ಕೂಟದ ನಾಯಕರಲ್ಲಿ ಭಿನ್ನಮತ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕರು ಕಾಂಗ್ರೆಸ್‌ ವಿರುದ್ಧ ಸಾಲು ಸಾಲು ಹೇಳಿಕೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ, ಬಿಜೆಪಿಯನ್ನು ಸೋಲಿಸಲು ಒಗ್ಗೂಡಿದ ಪಕ್ಷಗಳಲ್ಲಿಯೇ ಈಗ ಒಗ್ಗಟ್ಟಿನ ಸಮಸ್ಯೆ ಎದುರಾಗಿದ್ದು, ಲೋಕಸಭೆ ಚುನಾವಣೆ ವೇಳೆಗೆ ಇದನ್ನು ಹೇಗೆ ಬಗೆಹರಿಸಿಕೊಳ್ಳುತ್ತವೆ? ಆ ಮೂಲಕ ಹೇಗೆ ಆಡಳಿತ ಪಕ್ಷಕ್ಕೆ ತಿರುಗೇಟು ನೀಡುತ್ತವೆ ಎಂಬುದನ್ನು ಕಾದುನೋಡಬೇಕಿದೆ.

Exit mobile version