ನವ ದೆಹಲಿ: ದೇಶದಲ್ಲಿ 5ಜಿ ನೆಟ್ವರ್ಕ್ ಸೇವೆ (5G Services) ಶೀಘ್ರವೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದ್ದರೂ ಯಾವಾಗಿನಿಂದ ಶುರು ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ. ಹೀಗಿರುವಾಗ ಇಂದು ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಅವರು ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ಭಾರತದಲ್ಲಿ 5ಜಿ ಅಂತರ್ಜಾಲ ಸೇವೆಯನ್ನು ಆದಷ್ಟು ಕ್ಷಿಪ್ರವಾಗಿ ಅಂದರೆ ಅಕ್ಟೋಬರ್ 12ರೊಳಗೇ ಪ್ರಾರಂಭಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದ್ದಾರೆ.
ಏರ್ಟೆಲ್ ಹಾಗೂ ಜಿಯೋಗಳು ಆಗಸ್ಟ್ ತಿಂಗಳ ಅಂತ್ಯದಿಂದಲೇ 5ಜಿ ಅಂತರ್ಜಾಲ ಸೇವೆ ಪ್ರಾರಂಭಿಸುವುದಾಗಿ ಈ ಹಿಂದೆ ವರದಿಯೂ ಆಗಿತ್ತು. ಆದರೆ ಇದುವರೆಗೂ ಯಾವುದೇ ಟೆಲಿಕಾಂ ಆಪರೇಟರ್ಗಳು 5ಜಿ ನೆಟ್ವರ್ಕ್ ಸರ್ವೀಸ್ ಶುರು ಮಾಡಿಲ್ಲ. ಈ ಬಾರಿ ಸ್ವಾತಂತ್ರ್ಯೋತ್ಸವದ ದಿನ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ, ಭಾಷಣ ಮಾಡಿದ ಪ್ರಧಾನಿ ಮೋದಿಯೂ ಕೂಡ ‘ಭಾರತದಲ್ಲಿ ಶೀಘ್ರವೇ 5 ಜಿ ಪ್ರಾರಂಭವಾಗಲಿದೆ’ ಎಂದು ಹೇಳಿದ್ದರು. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯ ಆರ್ಥಿಕ ಪ್ರಕೋಷ್ಠ ಹಮ್ಮಿಕೊಂಡಿದ್ದ ‘ವಿಶ್ವಗುರು ಭಾರತ’ 100ನೇ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕೂಡ ಇದೇ ಮಾತುಗಳನ್ನಾಡಿದ್ದರು.
ಇಂದು 5ಜಿ ಸೇವೆ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ‘ದೇಶದಲ್ಲಿ ಶೀಘ್ರದಲ್ಲಿ 5 ಜಿ ಸೇವೆ ಪ್ರಾರಂಭಿಸುವ ನಿಟ್ಟಿನಲ್ಲಿ ಟೆಲಿಕಾಂ ಆಪರೇಟರ್ಸ್ಗಳು ಕೆಲಸ ಮಾಡುತ್ತಿವೆ. ಅಕ್ಟೋಬರ್ 12ರೊಳಗೇ ಪ್ರಾರಂಭಿಸಿ, ನಿಧಾನಕ್ಕೆ ಎಲ್ಲ ನಗರಗಳು, ಪಟ್ಟಣಗಳಿಗೆ ವ್ಯಾಪಿಸಲಾಗುವುದು. ಇನ್ನೆರಡು ಮೂರು ವರ್ಷಗಳಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ, ದೇಶದೆಲ್ಲೆಡೆ ತಲುಪುವಂತೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Airtel 5G| ಭಾರತದಲ್ಲಿ ಮೊದಲ ಬಾರಿಗೆ ಏರ್‌ಟೆಲ್‌ನಿಂದ ಇದೇ ತಿಂಗಳು 5ಜಿ ಸೇವೆ ಆರಂಭ