Site icon Vistara News

ಐಸಿಸ್‌ ಉಗ್ರರ ಪರವಾಗಿ ಕೆಲಸ; ಅಲಿಗಢ ಮುಸ್ಲಿಂ ವಿವಿಯ 6 ವಿದ್ಯಾರ್ಥಿಗಳ ಬಂಧನ!

ISIS Terrorist

6 Aligarh Muslim University students arrested for working as ISIS operative

ಲಖನೌ: ದೇಶದ ಶಿಕ್ಷಣ ಸಂಸ್ಥೆಗಳು ಇತ್ತೀಚೆಗೆ ಗಲಭೆ, ಗಲಾಟೆ, ಹಿಂಸಾಚಾರ, ದೇಶವಿರೋಧಿ ಘೋಷಣೆಗಳಿಗಾಗಿ ಸುದ್ದಿಯಾಗುತ್ತಿವೆ. ಸಂಶೋಧನೆ, ಸೃಜನಶೀಲತೆ, ಅಂಕ ಸಾಧನೆಗಾಗಿ ಸುದ್ದಿಯಾಗದೆ, ನಕಾರಾತ್ಮಕ ಅಂಶಗಳಿಗಾಗಿ ಸುದ್ದಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಐಸಿಸ್‌ ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶದಲ್ಲಿರುವ (Uttar Pradesh) ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (Aligarh Muslim University) ಆರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಐಸಿಸ್‌ ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡುತ್ತಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಹಲವೆಡೆ ರಾಜ್ಯದ ಭಯೋತ್ಪಾದನೆ ನಿಗ್ರಹ ದಳದ (Anti-Terror Squad) ಅಧಿಕಾರಿಗಳು ದಾಳಿ ನಡೆಸಿ ಆರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ಆರೋಪಿಗಳನ್ನು ರಕೀಬ್‌ ಇನಾಮ್‌, ನಾವೆದ್‌ ಸಿದ್ದಿಕಿ, ಮೊಹಮ್ಮದ್‌ ನೊಮಾನ್‌ ಹಾಗೂ ಮೊಹಮ್ಮದ್‌ ನಾಜಿಮ್‌ ಎಂಬುದಾಗಿ ಗುರುತಿಸಲಾಗಿದೆ.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ

ದೇಶಾದ್ಯಂತ ದಾಳಿಗೆ ಸಂಚು

ದೇಶದ ಹಲವೆಡೆ ಪ್ರಮುಖ ಉಗ್ರ ದಾಳಿ ನಡೆಸುವುದು ಈ ಆರು ವಿದ್ಯಾರ್ಥಿಗಳ ಸಂಚಾಗಿತ್ತು ಎಂದು ಭಯೋತ್ಪಾದನೆ ನಿಗ್ರಹ ದಳದ ಮೂಲಗಳಿಂದ ತಿಳಿದುಬಂದಿದೆ. ಆರೂ ವಿದ್ಯಾರ್ಥಿಗಳು ಐಸಿಸ್‌ ಉಗ್ರ ಸಂಘಟನೆಯ ಪರವಾಗಿ ಕೆಲಸ ಮಾಡುತ್ತಿದ್ದರು. ಇವರು ಹಲವು ಸಭೆಗಳನ್ನು ನಡೆಸುವ ಮೂಲಕ ದೇಶದ ಹಲವೆಡೆ ದಾಳಿ ನಡೆಸುವ ಸಂಚು ರೂಪಿಸಿದ್ದರು. ಇದರ ಕುರಿತು ನಿಖರ ಮಾಹಿತಿ ಮೇರೆಗೆ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: Fraud Case : ನಕಲಿ RAW ಅಧಿಕಾರಿ ಅರೆಸ್ಟ್‌; ಆ ವಿದ್ಯಾರ್ಥಿಯಲ್ಲಿತ್ತು ಹಲವು ಐಡಿ ಕಾರ್ಡ್‌, ಪೊಲೀಸ್‌ ಯುನಿಫಾರ್ಮ್‌!

ವಿದ್ಯಾರ್ಥಿಗಳ ಒಕ್ಕೂಟದ ಸಭೆಯಲ್ಲೇ ಪಿತೂರಿ

ಅಲಿಗಢ ಮುಸ್ಲಿಂ ವಿದ್ಯಾರ್ಥಿಗಳ ಒಕ್ಕೂಟದ ಸಭೆಯಲ್ಲಿಯೇ ದಾಳಿ ಕುರಿತು ಸಂಚು ರೂಪಿಸುವುದು ಸೇರಿ ಹಲವು ಪಿತೂರಿ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳ ಒಕ್ಕೂಟದ ಸಭೆಯಲ್ಲಿಯೇ ದಾಳಿಗೆ ಸಂಚು ರೂಪಿಸುವುದು, ಐಸಿಸ್‌ ಪರವಾಗಿ ಕೆಲಸ ಮಾಡಲು ಯುವಕರನ್ನು ನೇಮಿಸಿಕೊಳ್ಳುವುದು ಸೇರಿ ಹಲವು ಪಿತೂರಿಗಳನ್ನು ನಡೆಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಹಾಗೆಯೇ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳ ಕಣ್ಣೂ ಇದೆ ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version