ಲಖನೌ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆ ಮೊಘಲ್‌ಘರಾಹಿ ಎಂಬ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿ 121 ಮಂದಿ ಮೃತಪಟ್ಟಿದ್ದಾರೆ. ನಾರಾಯಣ ಸಕಾರ್ ಹರಿ (Narayan Sakaar Hari) ಅಥವಾ ಸಕಾರ್ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ತನಿಖೆ ಆರಂಭಿಸಿರುವ ಉತ್ತರ ಪ್ರದೇಶ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಹಾಗೆಯೇ, ಪ್ರಮುಖ ಆರೋಪಿಯ ಕುರಿತು ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದಾರೆ.
“ಹತ್ರಾಸ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿ ಒಟ್ಟು ಆರು ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ. ಇದುವರೆಗೆ 121 ಮಂದಿ ಮೃತಪಟ್ಟಿದ್ದು, ಎಲ್ಲರ ಶವಗಳನ್ನು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯೂ ಮುಕ್ತಾಯಗೊಂಡಿದೆ” ಎಂದು ಅಲಿಗಢ ಐಜಿ ಶಾಲಾಭ್ ಮಾಥುರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಭೋಲೆ ಬಾಬಾ ನಂತರ ಪ್ರತ್ಯಕ್ಷರಾಗಿದ್ದು, “ನಾನು ಸತ್ಸಂಗ ಮುಗಿಸಿ ತೆರಳಿದ ಬಳಿಕ ಘಟನೆ ನಡೆದಿದೆ. ಇದು ಸಮಾಜಘಾತುಕ ಶಕ್ತಿಗಳ ಕೃತ್ಯ” ಎಂದಿದ್ದಾರೆ. ಕಾಲ್ತುಳಿತದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದೆ.
#WATCH | On Hathras stampede incident, Aligarh IG Shalabh Mathur says, "The death toll stands at 121. All bodies have been identified and post mortem procedure completed." pic.twitter.com/V03RcM9DI5
— ANI (@ANI) July 4, 2024
ಹತ್ರಾಸ್ ಕಾಲ್ತುಳಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದು, ಈಗಾಗಲೇ ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂ., ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಘೋಷಿಸಿದೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿಯನ್ನೂ ರಚಿಸಲಾಗಿದೆ. ಮತ್ತೊಂದೆಡೆ, ನೂರಾರು ಜನರ ಸಾವಿನ ಬಳಿಕ ಭೋಲೆ ಬಾಬಾ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾಲ್ತುಳಿತದ ಕುರಿತು ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. “ಕಾರ್ಯಕ್ರಮದಲ್ಲಿ ಹೆಚ್ಚಿನ ಜನ ಸೇರಿದ್ದರು. ಸತ್ಸಂಗ ಮುಗಿದ ಬಳಿಕ ಇನ್ನೇನು ಭೋಲೆ ಬಾಬಾ ಹೊರಡುವವರಿದ್ದರು. ಇದೇ ವೇಳೆ ಲಕ್ಷಾಂತರ ಜನ ಅವರ ಪಾದ ಮುಟ್ಟಿ, ಅವರು ಮೆಟ್ಟಿದ ನೆಲದ ಮಣ್ಣನ್ನು ತೆಗೆದುಕೊಳ್ಳಲು ಓಡಿ ಹೋಗಿದ್ದಾರೆ. ಹಾಗೆ, ಓಡಿ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಗಿದೆ. ಒಬ್ಬರನ್ನೊಬ್ಬರು ತುಳಿದುಕೊಂಡು ಮುಂದೆ ಸಾಗಿದ್ದು ಹಾಗೂ ಚರಂಡಿಯಲ್ಲಿ ಬಿದ್ದಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಲು ಕಾರಣವಾಗಿದೆ” ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Hathras Stampede: ಹತ್ರಾಸ್ ಕಾಲ್ತುಳಿತ- FIRನಲ್ಲಿ ಭೋಲೇ ಬಾಬಾನ ಹೆಸರೇ ಇಲ್ಲ!