Site icon Vistara News

Indian Army Dog: ದೇಶದ ಸೇನೆಯಲ್ಲಿ ಶ್ವಾನವೂ ಸೈನಿಕ; ಯೋಧನ ರಕ್ಷಿಸಲು ಹೋದ ಶ್ವಾನ ಹುತಾತ್ಮ

Indian Army Dog Kent

6 year-old Army dog dies protecting soldier during encounter in Jammu Kashmir

ಶ್ರೀನಗರ: ಶ್ವಾನ ನಿಯತ್ತಿನ ಪ್ರಾಣಿ ಎಂದೇ ಖ್ಯಾತಿಯಾಗಿದೆ. ಅನ್ನ ಹಾಕಿದವರಿಗೆ ರಕ್ಷಣೆ ನೀಡುವ ಜತೆಗೆ ಯಾವ ತ್ಯಾಗಕ್ಕೂ ಶ್ವಾನ ಸಿದ್ಧವಾಗಿರುತ್ತದೆ. ಅದರಲ್ಲೂ, ಭಾರತೀಯ ಸೇನೆಯಲ್ಲಿ ಶ್ವಾನಗಳ ಪಾತ್ರ ಮಹತ್ತರವಾಗಿದೆ. ಉಗ್ರರನ್ನು ಹಿಡಿಯುವ ಕಾರ್ಯಾಚರಣೆಯಿಂದ ಹಿಡಿದು ಎಲ್ಲ ರೀತಿಯಲ್ಲೂ ಶ್ವಾನಗಳು ಸೇನೆಗೆ ನೆರವಾಗಿವೆ ಹಾಗೂ ಪ್ರಾಣತ್ಯಾಗವನ್ನೂ ಮಾಡಿವೆ. ಇದಕ್ಕೆ ನಿದರ್ಶನ ಎಂಬಂತೆ, ಜಮ್ಮು-ಕಾಶ್ಮೀರದಲ್ಲಿ (Jammu Kashmir Encounter) ನಡೆದ ಎನ್‌ಕೌಂಟರ್‌ ವೇಳೆ ಯೋಧನನ್ನು ರಕ್ಷಿಸಿದ ಶ್ವಾನವು (Indian Army Dog) ಉಗ್ರರ ಗುಂಡಿಗೆ ಬಲಿಯಾಗಿದೆ.

ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಮಂಗಳವಾರ (ಸೆಪ್ಟೆಂಬರ್‌ 12) ಎನ್‌ಕೌಂಟರ್‌ ನಡೆದಿದೆ. ಇದೇ ವೇಳೆಯ ಸೇನೆಯ, ಆರು ವರ್ಷದ ಕೆಂಟ್‌ ಶ್ವಾನವು ಉಗ್ರರ ಗುಂಡಿಗೆ ಬಲಿಯಾಗಿದೆ. ರಾಜೌರಿ ಜಿಲ್ಲೆಯಲ್ಲಿ ಉಗ್ರರು ಅಡಗಿರುವ ತಾಣದ ಜಾಡು ಹಿಡಿದು ಕೆಂಟ್‌ ತೆರಳುತ್ತಿತ್ತು. ಇದೇ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಆಗ ಯೋಧರೊಬ್ಬರನ್ನು ಗುಂಡಿನಿಂದ ತಪ್ಪಿಸಲು ಅಡ್ಡ ಬಂದು ಕೆಂಟ್‌ ಹುತಾತ್ಮನಾಗಿದೆ ಎಂದು ತಿಳಿದುಬಂದಿದೆ.

“ಉಗ್ರರ ಶೋಧಕ್ಕಾಗಿ ನಡೆದ ಕಾರ್ಯಾಚರಣೆಯು ಎನ್‌ಕೌಂಟರ್‌ಗೆ ತಿರುಗಿದೆ. ಇದೇ ವೇಳೆ ಗುಂಡಿನ ಚಕಮಕಿಯಲ್ಲಿ 21 ಸೇನಾ ಶ್ವಾನ ವಿಭಾಗದ ಕೆಂಟ್‌ ಎಂಬ ಆರು ವರ್ಷದ ಶ್ವಾನವು ಮೃತಪಟ್ಟಿದೆ. ಹಲವು ಗುಂಡು ತಾಗಿದ ಕೆಂಟ್‌ ಸ್ಥಳದಲ್ಲೇ ಮೃತಪಟ್ಟಿದೆ” ಎಂದು ಭಾರತೀಯ ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ. ಶ್ವಾನವು ಸೇನೆಯ ‘ಆಪರೇಷನ್‌ ಸುಜಾಲಿಗಾಲಾ’ ಸೇರಿ ಹಲವು ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಲಷ್ಕರೆ ಕಮಾಂಡರ್‌ ಸೇರಿ ಇಬ್ಬರು ಉಗ್ರರ ಮಟಾಶ್

ಒಬ್ಬ ಉಗ್ರನ ಹತ್ಯೆ, ಯೋಧ ಹುತಾತ್ಮ

ರಾಜೌರಿಯಲ್ಲಿ ನಡೆದ ಎನ್‌ಕೌಂಟರ್‌ ವೇಳೆ ಸೈನಿಕರು ಒಬ್ಬ ಉಗ್ರನನ್ನು ಹತ್ಯೆಗೈದರೆ, ದೇಶದ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಅವರಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಕಾಶ್ಮೀರದಲ್ಲಿ ಯೋಧರು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದರು.

Exit mobile version